ಚಿಕ್ಕಮಗಳೂರು, ಆ. 24 : ಜಿಲ್ಲೆಯ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ಹಾಕಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಬೃಹತ್ ಕಟೌಟ್‌ಗೆ ದೇಶ ವಿರೋಧಿ ಹಾಗೂ ಪಾಕಿಸ್ತಾನಿ ಸೇನೆಯನ್ನು ವೈಭವೀಕರಿಸುವ ಹಾಡನ್ನು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಟಿಪ್ಪು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ದೃಶ್ಯಾವಳಿಗಳಿಗೆ “ನಾವು ಪಾಕಿಸ್ತಾನಿ ಮುಜಾಹಿದ್‌ಗಳು…” ಎಂಬ ಪರಮ ಉಗ್ರ ಸಾಲುಗಳಿರುವ ಹಾಡನ್ನು ಸೇರಿಸಿ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಹೆಸರಿನ ಖಾತೆಯಲ್ಲಿ ರೀಲ್ಸ್ ಹರಿಬಿಡಲಾಗಿತ್ತು.
ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಚಿಕ್ಕಮಗಳೂರು ನಗರ ಠಾಣೆಯ ಇನ್ಸೆಕ್ಟರ್ ಧನರಾಜ್ ಅವರು ಸ್ವತಃ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕೋಮು ಸೌಹಾರ್ದತೆಗೆ ಭಂಗ ತರುವ, ಧಾರ್ಮಿಕ ನಂಬಿಕೆಗಳಿಗೆ ಅಪಮಾನವೆಸಗುವ ಹಾಗೂ ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ದ್ವೇಷ ಭಾವನೆ ಹರಡುವ ಹುನ್ನಾರ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಇನ್ಸೆಕ್ಟರ್ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ನಗರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.




