ಕೊಪ್ಪಳ, ಡಿ. 09 : ಪ್ರೀ-ವೆಡ್ಡಿಂಗ್ ಶೂಟ್‌ಗಾಗಿ ತೆರಳಿದ್ದ ಭಾವಿ ದಂಪತಿ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ನಡೆದಿದೆ.
ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲೂಕಿನ ಮುನ್ನೂರು ಗ್ರಾಮದ ಕವಿತಾ ಮೃತರು ಎಂದು ಗುರುತಿಸಲಾಗಿದೆ. ಈ ಜೋಡಿಯ ಮದುವೆಯನ್ನು ಇದೇ ತಿಂಗಳ 20ರಂದು ನಿಶ್ಚಯಿಸಲಾಗಿತ್ತು. ಈ ಮಧ್ಯೆ ಇಬ್ಬರು ಮದುವೆ ಹಿನ್ನೆಲೆ ಇಬ್ಬರು ಪ್ರೀ-ವೆಡ್ಡಿಂಗ್ ಶೂಟ್‌ಗಾಗಿ ತೆರಳಿದ್ದರು.
ಮುನಿರಾಬಾದ್‌ನ ಪಂಪಾವನ, ಕೂಕನಪಳ್ಳಿಯ ಬೂದೇಶ್ವರ ದೇವಸ್ಥಾನ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಬಳಿಕ ಮೃತ ಕರಿಯಪ್ಪ, ಕವಿತಾಳನ್ನು ಬೈಕ್ ಮೇಲೆ ಮುನ್ನೂರಿಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಬರುತ್ತಿದ್ದ ಮತ್ತೊಂದು ಲಾರಿಗೆ ಬೈಕ್ ಢಿಕ್ಕಿ ಹೊಡೆದಿದೆನ್ನಲಾಗಿದೆ. ಅಪಘಾತದ ತೀವ್ರತೆಗೆ ಕವಿತಾ ಅವರು ಸ್ಥಳದಲ್ಲೇ ಸಾವನ್ನಪ್ಪಿದುಉ, ಕರಿಯಪ್ಪ ಅವರು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲು ಮಾಡಿ, ತನಿಖೆ ಆರಂಭಿಸಿದ್ದಾರೆ. ಇನ್ನು ಕರಿಯಪ್ಪನ ಜೊತೆಗೆ ಆತನ ಅಣ್ಣ ರಮೇಶ್‌ನನ್ನು ಕೂಡ ವಿವಾಹ ನಿಶ್ಚಿತವಾಗಿತ್ತು. ಹೀಗಾಗಿ ಸಹೋದರರಿಬ್ಬರೂ ಸಹ ಫೋಟೋಶೂಟ್‌ಗೆ ತೆರಳಿದ್ದರು. ಫೋಟೋಶೂಟ್ ಬಳಿಕ ರಮೇಶ್ ಊರಿಗೆ ತೆರಳಿದರೆ, ಕರಿಯಪ್ಪ, ತನ್ನ ಭಾವಿ ಪತ್ನಿಯನ್ನು ಊರಿಗೆ ಬಿಡಲು ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಕರಿಯಪ್ಪ ಹಾಗೂ ಕವಿತಾ ಮನೆಯವರಿಬ್ಬರು ಮದುವೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಮಾತ್ರ ಇಬ್ಬರನ್ನು ಹಸೆಮಣೆಗೆ ಏರಿಸುವ ಬದಲು ಮಸಣವನ್ನು ಸೇರಿಸಿದೆ. ಅಪಘಾತದ ಬಳಿಕ ಇಡೀ ಊರಿಗೆ ಊರು ದು:ಖತಪ್ತವಾಗಿದೆ.

