ಮಂಗಳೂರು, ನ.13 : ಶೂನ್ಯ ಸವಕಳಿ ವಿಮೆ (Zero Depreciation Insurance) ಪಡೆದಿದ್ದರೂ ವಾಹನದ ದುರಸ್ತಿ ವೆಚ್ಚದಲ್ಲಿ ಹಣ ಕಡಿತ ಮಾಡಿದ ಟಾಟಾ ಎಐಜಿ ವಿಮಾ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ ಬಾಕಿ ಹಣ, ಪರಿಹಾರ ಹಾಗೂ ಕಾನೂನು ವೆಚ್ಚ ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ಕಂಕನಾಡಿ ನಿವಾಸಿ, ದ. ಕ. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರು ತಮ್ಮ ಟೊಯೋಟಾ ಇನ್ನೋವಾ ಕಾರಿಗೆ ಟಾಟಾ ಎಐಜಿ ವಿಮಾ ಕಂಪನಿಯಿಂದ ಶೂನ್ಯ ಸವಕಳಿ ವಿಮೆ ಪಡೆದಿದ್ದರು. 2025ರ ಮೇ 3 ರಂದು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಕಾರನ್ನು ಯುನೈಟೆಡ್ ಟೊಯೋಟಾ ವರ್ಕ್ಶಾಪ್ನಲ್ಲಿ ದುರಸ್ತಿಗೆ ನೀಡಲಾಗಿತ್ತು. ದುರಸ್ತಿ ವೆಚ್ಚವನ್ನು ವಿಮಾ ಕಂಪನಿ ಅಂದಾಜಿಸಿ ಸಂಪೂರ್ಣ ಹಣ ಪಾವತಿಸದೆ ಕೆಲವು ಮೊತ್ತವನ್ನು ಕಡಿತ ಮಾಡಿತ್ತು.

ಶೂನ್ಯ ಸವಕಳಿ ವಿಮೆ ಪಡೆದಿದ್ದರೂ ದುರಸ್ತಿ ವೆಚ್ಚದಲ್ಲಿ ಹಣ ಕಡಿತ ಮಾಡಿರುವುದು ಸರಿಯಲ್ಲ ಎಂದು ಪದ್ಮರಾಜ್ ರಾಮಯ್ಯ ಅವರು ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ವಿಮಾ ಕಂಪನಿಯು ವಾಹನದ ಬಿಡಿಭಾಗಗಳ ಮೌಲ್ಯ ಕಡಿತಕ್ಕಾಗಿ ಹೆಚ್ಚುವರಿ ಹಣವನ್ನು ಮತ್ತೆ ಕಡಿತ ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ವಿಮಾ ಕಂಪನಿಯ ಈ ಕ್ರಮ ಸೇವಾ ನ್ಯೂನತೆ ಎಂದು ಆಯೋಗ ತಿಳಿಸಿದೆ.
ಆಯೋಗದ ಅಧ್ಯಕ್ಷರ ಪ್ರಭಾರ ನ್ಯಾಯಾಧೀಶರಾದ ಸೋಮಶೇಖರಪ್ಪ ಕೆ. ಹಂಡಿಗೋಳ್ ಹಾಗೂ ಮಹಿಳಾ ಸದಸ್ಯೆ ಶಾರದಮ್ಮ ಎಚ್.ಜಿ. ಅವರ ಪೀಠವು, ಟಾಟಾ ಎಐಜಿ ವಿಮಾ ಕಂಪನಿಯು ದೂರುದಾರರಿಗೆ ಬಾಕಿ ದುರಸ್ತಿ ವೆಚ್ಚವನ್ನು ಶೇ.6 ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದೆ.
ಇದರ ಜೊತೆಗೆ ಗ್ರಾಹಕರಿಗೆ ಉಂಟಾದ ಮಾನಸಿಕ ನೋವು ಮತ್ತು ತೊಂದರೆಗಾಗಿ ಪರಿಹಾರ ಹಾಗೂ ಕಾನೂನು ವೆಚ್ಚವನ್ನು ನೀಡುವಂತೆ ಸೂಚಿಸಿದೆ.
ದೂರುದಾರರ ಪರವಾಗಿ ವಕೀಲರಾದ ಪೃಥ್ವಿಶ್ ಧರ್ಮಸ್ಥಳ ಅವರು ವಾದ ಮಂಡಿಸಿದ್ದರು.

