ಅಮೇರಿಕಾ, ಅ. 19 : ಇಕ್ವೆಡಾರ್ ನಲ್ಲಿ ಧರ್ಮಪ್ರವಚನದ ವೇಳೆ ಬೃಹತ್ ಸಿಲುಬೆಯೊಂದು (Crucifix) ನೇರವಾಗಿ ಪಾದ್ರಿಯ ತಲೆ ಮೇಲೆಯೇ ಕುಸಿದುಬಿದ್ದ ಪರಿಣಾಮ ಪಾದ್ರಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಇಕ್ವೆಡಾರ್ನ ಕ್ಯಾಥೋಲಿಕ್ ಚರ್ಚೆ ನಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಧರ್ಮಪ್ರವಚನದ ಲೈವ್ಸ್ಟ್ರೀಮ್ (ನೇರ ಪ್ರಸಾರ) ಆಗುತ್ತಿದ್ದ ವೇಳೆಯೇ ದುರ್ಘಟನೆ ನಡೆದಿದ್ದು ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಗುವಾಕಿಲ್ನ ಅವರ್ ಲೇಡಿ ಆಫ್ ಪರ್ಪೆಚುವಲ್ ಹೆಲ್ಪ್ (Our Lady of Perpetual Help) ಚರ್ಚ್ನ ಪಾಲನಾ ಧರ್ಮಗುರುಗಳಾಗಿರುವ ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಾಂಚೆಜ್ ಮೊಲಿನಾರಿ (Father Patricio Alfredo Sanchez Molinari) ಮೃತಪಟ್ಟವರು.
ಘಟನೆ ವಿವರ :
ಶನಿವಾರದಂದು ಚರ್ಚ್ನಲ್ಲಿ ಎಂದಿನಂತೆ ಸಾಮೂಹಿಕ ಧರ್ಮಪ್ರವಚನ ನಡೆಯುತ್ತಿತ್ತು. ಈ ಸಮಾರಂಭದ ನೇರ ಪ್ರಸಾರವೂ ಆಗುತ್ತಿತ್ತು. ವೀಡಿಯೊದಲ್ಲಿ ಕಾಣಿಸುವಂತೆ, ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಂಚೆಜ್ ಮೊಲಿನಾರಿ ಅವರು ಜತೆಯಲ್ಲಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಿದ್ದರು. ಈ ವೇಳೆ ಅವರ ಹಿಂದಿನ ಗೋಡೆಯ ಮೇಲೆ ಅಳವಡಿಸಲಾಗಿದ್ದ ಬೃಹತ್ ಶಿಲುಬೆಯು ಇದ್ದಕ್ಕಿದ್ದಂತೆ ಹಠಾತ್ತನೆ ಕಳಚಿ ನೇರವಾಗಿ ಅವರ ಮೇಲೆಯೇ ಕುಸಿದುಬಿದ್ದಿದೆ. ಅಪಘಾತದ ರಭಸಕ್ಕೆ ಪಾದ್ರಿಯವರು ಸ್ಥಳದಲ್ಲೇ ಕುಸಿದುಬಿದ್ದು ಕಾಣದಂತೆ ಮರೆಯಾಗಿದ್ದಾರೆ. ಬಳಿಕ ಬೃಹತ್ ಶಿಲುಬೆಯು ಪಾದ್ರಿ ಅವರು ನಿಂತಿದ್ದ ಮೇಜಿನ ಮೇಲೆ ಬಿದ್ದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆರ್ಚ್ಡಯಾಸೀಸ್ ಸಂತಾಪ:
ಘಟನೆಯ ಕುರಿತು ಬಾನುವಾರ ಅಧಿಕೃತವಾಗಿ ಸ್ಪಷ್ಟಪಡಿಸಿರುವ ಗುವಾಕಿಲ್ನ ಆರ್ಚ್ಡಯಾಸೀಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಂಚೆಜ್ ಮೊಲಿನಾರಿ ಅವರ ನಿಧನವನ್ನು ದೃಢಪಡಿಸಿದೆ. “ನಮ್ಮ ಪ್ರೀತಿಯ ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಂಚೆಜ್ ಮೊಲಿನಾರಿ, ಸೆಂಟ್ರಲ್ ವಿಕಾರಿಯೇಟ್ ನ ನಮ್ಮ ಲೇಡಿ ಆಫ್ ಪೆರ್ಪೆಚುವಲ್ ಹೆಲ್ಪ್ ಚರ್ಚ್ನ ಪಾಲನಾ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದವರು, ಭಗವಂತನ ದಿವ್ಯ ಸನ್ನಿಧಿಯಲ್ಲಿ ಆನಂದಿಸಲು ದೇವರ ಮನೆಗೆ ತೆರಳಿದ್ದಾರೆ ಎಂಬುದನ್ನು ನಾವು ತೀವ್ರ ಸಂತಾಪದಿಂದ ಘೋಷಿಸುತ್ತೇವೆ” ಎಂದು ಆ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಅಲ್ಲದೆ, “ಓ ದೇವರೇ, ಅವರಿಗೆ ನಿತ್ಯ ಶಾಂತಿ ಕರುಣಿಸು. ಮತ್ತು ಶಾಶ್ವತ ಬೆಳಕು ಅವರ ಮೇಲೆ ಬೆಳಗಲಿ. ಅವರು ಶಾಂತಿಯಿಂದ ವಿಶ್ರಮಿಸಲಿ. ಆಮೆನ್” ಎಂದು ಪ್ರಾರ್ಥನೆಯೊಂದಿಗೆ ಪೋಸ್ಟ್ ಅನ್ನು ಮುಕ್ತಾಯಗೊಳಿಸಲಾಗಿದೆ. ಮೃತ ಫಾಧರ್ ಪ್ಯಾಟ್ರಿಸಿಯೊ ಅಲ್ಫ್ರೆಡೊ ಸಂಚೆಜ್ ಮೊಲಿನಾರಿ ಅವರು ಅತ್ಯಂತ ಪವಿತ್ರ ರಿಡೀಮರ್ ಸಭೆಯ (Congregation of the Most Holy Redeemer) ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

