ಬೆಳ್ತಂಗಡಿ, ಆ. 03 : ಗುರುವಾಯನಕೆರೆಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.31 ರಂದು ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಎಡಮಂಗಲದ ನಿವಾಸಿ ಹಾಗೂ ಹಾಸ್ಟೆಲ್ ವಾರ್ಡನ್ ಅವಿನ್ ಕುಮಾರ್ ಬಿ. ಅವರು ನೀಡಿದ ದೂರಿನಂತೆ, ಜು.31 ರಂದು ಬೆಳಿಗ್ಗೆ ಸುಮಾರು 11.40 ಕ್ಕೆ ವಿದ್ಯಾರ್ಥಿ ಮದನ್ ರೆಡ್ಡಿ ಹೊಟ್ಟೆ ನೋವು ಮತ್ತು ವಾಂತಿ ಆಗುತ್ತಿರುವುದಾಗಿ ತಿಳಿಸಿ ವಿಶ್ರಾಂತಿ ಪಡೆಯಲು ಅನುಮತಿ ಕೇಳಿದ್ದಾನೆ. ವಾರ್ಡನ್ ಅವರು ಪ್ರಾಂಶುಪಾಲರಿಂದ ಅನುಮತಿ ಪಡೆದು ವಿಶ್ರಾಂತಿಗೆ ತೆರಳುವಂತೆ ಸೂಚಿಸಿದ್ದರು.
ಬಳಿಕ ಮಧ್ಯಾಹ್ನ 12.30 ಕ್ಕೆ ವಾರ್ಡನ್ ಕೊಠಡಿಗೆ ತೆರಳಿ ನೋಡಿದಾಗ ವಿದ್ಯಾರ್ಥಿ ಅಲ್ಲಿ ಇರಲಿಲ್ಲ. ನಂತರ ಆತನ ಕೊಠಡಿಗೆ ತೆರಳಿದಾಗ ಬಾಗಿಲು ಒಳಗಿನಿಂದ ಗೋಡ್ರೆಜ್ ಅಳವಡಿಸಿದ್ದರಿಂದ ತೆಗೆಯಲು ಅಡ್ಡಿಯಾಯಿತು. ಬಾಗಿಲನ್ನು ಬಲವಂತವಾಗಿ ತೆರೆದು ನೋಡಿದಾಗ, ಕೊಠಡಿಯ ಸೀಲಿಂಗ್ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿ ಮದನ್ ರೆಡ್ಡಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


