ಟಿ20 ವಿಶ್ವಕಪ್, ಜು. 16 : ಮುಂಬರುವ ಟಿ20 ವಿಶ್ವಕಪ್ಗೂ ಐಪಿಎಲ್ ಮಾದರಿಯ ಎಲಿಮಿನೇಟರ್ ರೌಂಡ್ ಅನ್ನು ಪರಿಚಯಿಸಲಾಗಿದ್ದು, ಆ ಮೂಲಕ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಇದ್ದಂತಹ ಸಾಂಪ್ರದಾಯಿಕ ‘ಸೂಪರ್ 8’ ಹಂತವನ್ನು ತೆಗೆದು ಹಾಕಿರುವ ಐಸಿಸಿ, ಅದರ ಜಾಗದಲ್ಲಿ ಮತ್ತಷ್ಟು ರೋಮಾಂಚನಕಾರಿ ಹಾಗೂ ಕಠಿಣ ಸವಾಲಿನ ‘ಸೂಪರ್ 10’ ಹಂತವನ್ನು ಪರಿಚಯಿಸಿದೆ.
ಹೊಸ ಸಹವರ್ತಿ ರಾಷ್ಟ್ರಗಳಿಗೆ ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾಶ ಕಲ್ಪಿಸುವ ಮತ್ತು ಟೂರ್ನಿಯ ಉತ್ತರಾರ್ಧದ ಪಂದ್ಯಗಳನ್ನು ಮತ್ತಷ್ಟು ರೋಚಕಗೊಳಿಸುವ ಉದ್ದೇಶದಿಂದ ಐಸಿಸಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಟ್ಟು ಪಂದ್ಯಗಳ ಸಂಖ್ಯೆ 55 ರಷ್ಟೇ ಉಳಿದಿದ್ದರೂ, ಲೀಗ್ ಹಂತ ಮತ್ತು ನಾಕೌಟ್ ಹಂತಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ.
ಹಂತ 1: ಗ್ರೂಪ್ ಸ್ಟೇಜ್:
- 2028ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳೆದ ಬಾರಿಯಂತೆ ಒಟ್ಟು 20 ತಂಡಗಳು ಭಾಗವಹಿಸಲಿವೆ.
- ಈ ಹಿಂದೆ ಇದ್ದ 5 ತಂಡಗಳ 4 ಗುಂಪುಗಳ ಬದಲಾಗಿ, ಇನ್ನು ಮುಂದೆ ತಲಾ 4 ತಂಡಗಳ 5 ಗುಂಪುಗಳನ್ನು ಮಾಡಲಾಗುತ್ತದೆ.
- ಈ ಹಂತದಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ (ಈ ಹಿಂದೆ 40 ಪಂದ್ಯಗಳಿದ್ದವು).
- ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 10 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡಲಿವೆ.
ಹಂತ 2: ‘ಸೂಪರ್ 10’:
- ಮೊದಲ ಸುತ್ತಿನಿಂದ ಅರ್ಹತೆ ಪಡೆದ 10 ತಂಡಗಳನ್ನು ತಲಾ 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
- ರೌಂಡ್-ರಾಬಿನ್ ಮಾದರಿಯಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ.
- ಸೂಪರ್ 10 ಹಂತದ ಎರಡು ಗುಂಪುಗಳ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
- ಎಲಿಮಿನೇಟರ್ ರೌಂಡ್:
- ಈ ಸುತ್ತಿನಲ್ಲಿ ಸೂಪರ್ 10ರ ಗ್ರೂಪ್-1 ರಲ್ಲಿ 2ನೇ ಸ್ಥಾನ ಪಡೆದ ತಂಡವು ಗ್ರೂಪ್-2ರ 3ನೇ ಸ್ಥಾನಿ ತಂಡದೊಂದಿಗೆ ಸೆಣಸಾಡಲಿದೆ. ಅದೇ ರೀತಿ ಗ್ರೂಪ್-2ರ 2ನೇ ಸ್ಥಾನಿ ತಂಡವು ಗ್ರೂಪ್-1ರ 3ನೇ ಸ್ಥಾನಿ ತಂಡದ ವಿರುದ್ಧ ಆಡಲಿದೆ.
- ಎಲಿಮಿನೇಟರ್ ಪಂದ್ಯಗಳಲ್ಲಿ ಗೆದ್ದ 2 ತಂಡಗಳು, ಈಗಾಗಲೇ ನೇರ ಅರ್ಹತೆ ಪಡೆದಿರುವ 2 ತಂಡಗಳೊಂದಿಗೆ ಸೆಮಿಫೈನಲ್‌ನಲ್ಲಿ ಕಾದಾಡಲಿವೆ.
- ಸೆಮಿಫೈನಲ್‌ನಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಲಿದೆ.
2028ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 10 ಹಂತದಿಂದ ಒಟ್ಟು 6 ತಂಡಗಳು ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲಿವೆ. ಮೊದಲಿಗೆ ಎರಡು ಗ್ರೂಪ್‌ಗಳ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟರೆ, ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳ ಮೂಲಕ ಸೆಮಿಫೈನಲ್‌ನ ಉಳಿದ 2 ಸ್ಥಾನಗಳಿಗಾಗಿ ಹೋರಾಡಲಿವೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್ನ ನಾಕೌಟ್ ಹಂತವು ಮತ್ತಷ್ಟು ರೋಚಕವಾಗಿರಲಿದೆ.
ಐಸಿಸಿ ತಂದಿರುವ ಈ ಹೊಚ್ಚ ಹೊಸ ‘ಸೂಪರ್ 10’ ಮತ್ತು ‘ಎಲಿಮಿನೇಟರ್’ ಸ್ವರೂಪವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಐಪಿಎಲ್ ಮಾದರಿಯ ಈ ನಾಕೌಟ್ ನಿಯಮದಿಂದಾಗಿ ಪ್ರತಿ ಪಂದ್ಯವೂ ಅಂತಿಮ ಓವರ್‌ನವರೆಗೂ ಕುತೂಹಲ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ರಿಕೆಟ್ ಪ್ರೇಮಿಗಳಿಗೆ ಮುಂದಿನ ಟಿ20 ವಿಶ್ವಕಪ್ ರೋಮಾಂಚನಕಾರಿ ರಸದೌತಣ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.


