ಮಂಗಳೂರು : ವಾಹನ ಜಪ್ತಿ ಕೋರ್ಟ್ ಆದೇಶವಿದೆ ಎಂದು ನಂಬಿಸಿ – ಲಾರಿಯನ್ನೇ ಎಗರಿಸಿದ ಖದೀಮರು

ಮಂಗಳೂರು, ಡಿ. 22 : ನಿಮ್ಮ ವಾಹನ ಜಪ್ತಿಯಾಗಿದೆ, ಇದರ ಕೋರ್ಟ್ ಆದೇಶ ನಮ್ಮ ಬಳಿ ಇದೆ ಎಂದು ನಂಬಿಸಿ ತಂಡವೊಂದು ಚಾಲಕನನ್ನು ವಂಚಿಸಿ, ಸಿನಿಮೀಯ ಶೈಲಿಯಲ್ಲಿ ಲಾರಿಯನ್ನೇ ಅಪಹರಿಸಿದ ಘಟನೆಯೊಂದು ನಗರ ಹೊರವಲಯದಲ್ಲಿ ನಡೆದಿದೆ.

Advertisement

ನವದುರ್ಗಾ ಫುಡ್ ಪ್ರಾಡಕ್ಟ್ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈ ವಂಚನೆಗೊಳಗಾದವರು ಎನ್ನಲಾಗಿದೆ. ನವೆಂಬರ್ 16 ರಂದು ಮಾಲೀಕರ ಸೂಚನೆಯಂತೆ ಶಶಿಕಾಂತ್ ಎಂಬವರಿಂದ ಬಾಡಿಗೆಗೆ ಪಡೆದ ಲಾರಿಯಲ್ಲಿ, ಫಿರ್ಯಾದಿದಾರರು ಪಡುಬಿದ್ರಿಯಿಂದ ಬ್ರೆಡ್ ಲೋಡ್ ಮಾಡಿಕೊಂಡು ಬಂದಿದ್ದರು. ನಗರದ ಕೆ.ಎಂ.ಎಫ್ (ಕೆಎಂಎಫ್‌) ಘಟಕದಲ್ಲಿ ಸರಕು ಇಳಿಸಿ ವಾಪಸಾಗುವಾಗ ಈ ಕೃತ್ಯ ನಡೆದಿದೆ. ಚಾಲಕ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ, ರಸ್ತೆ ಮಧ್ಯೆ ಟೂರಿಸ್ಟ್ ಕಾರೊಂದು ಲಾರಿಯನ್ನು ಅಡ್ಡಗಟ್ಟಿದೆ. ಕಾರಿನಿಂದ ಇಳಿದು ಬಂದ ಯುವಕನೊಬ್ಬ, ತನ್ನ ಬಳಿ ಕೋರ್ಟ್ ಆದೇಶವಿದ್ದು, ಈ ವಾಹನವನ್ನು ಜಪ್ತಿ ಮಾಡುತ್ತಿರುವುದಾಗಿ ಬೆದರಿಸಿದ್ದಾನೆ. ಈ ವೇಳೆ ಚಾಲಕ ತಮ್ಮ ಲಾಜಿಸ್ಟಿಕ್ ಸೂಪರ್‌ವೈಸರ್ ಸೋಮನಾಥ್ ಅವರಿಗೆ ಕರೆ ಮಾಡಿದಾಗ, ಫೋನ್ ಕಸಿದುಕೊಂಡ ಆರೋಪಿ ರಕ್ಷಿತ್ ಎಂಬಾತ, “ನಾವು ಶಶಿಕಾಂತ್ ಅವರ ಲಾರಿಯನ್ನು ವಶಕ್ಕೆ ಪಡೆಯುತ್ತಿದ್ದೇವೆ, ನಿಮ್ಮ ಚಾಲಕನನ್ನು ಸುರಕ್ಷಿತವಾಗಿ ಕಳುಹಿಸುತ್ತೇವೆ” ಎಂದು ಹೇಳಿ ನಂಬಿಸಿದ್ದಾನೆ.

ಬಳಿಕ ಚಾಲಕನ ಮೊಬೈಲ್ ಕಸಿದುಕೊಂಡ ರಕ್ಷಿತ್, ಲಾರಿಯನ್ನು ಕೈಕಂಬದ ಕಡೆಗೆ ಚಲಾಯಿಸುವಂತೆ ಆದೇಶಿಸಿದ್ದಾನೆ. ಇವರ ಹಿಂದೆಯೇ ಟೂರಿಸ್ಟ್ ಕಾರಿನಲ್ಲಿ ಮೂವರು ಹಿಂಬಾಲಿಸಿದ್ದಾರೆ. ವಾಮಂಜೂರಿನ ಪಿಲಿಕುಳ ರಸ್ತೆ ಸಮೀಪ ವಾಹನ ನಿಲ್ಲಿಸಿದ ಆರೋಪಿ, ಲಾರಿಯಲ್ಲಿದ್ದ ಜಿಪಿಎಸ್ ಸಂಪರ್ಕವನ್ನು ತಪ್ಪಿಸಿದ್ದಾನೆ. ನಂತರ ಗುರುಪುರ ಮಾರ್ಗವಾಗಿ ಕೈಕಂಬದತ್ತ ಸಾಗಿದ್ದಾರೆನ್ನಲಾಗಿದೆ. ಜಿಪಿಎಸ್ ಸಂಪರ್ಕ ತಪ್ಪಿಸಿದ ಕಾರಣದಿಂದಾಗಿ ಲಾರಿಯನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ.

ಚಾಲಕನಿಗೆ ಯಾಮಾರಿಸಿ ಪರಾರಿ

ಕೈಕಂಬ ತಲುಪಿದ ಬಳಿಕ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸಿ, ಅಲ್ಲೇ ಕಾಯುತ್ತಿದ್ದ ಬೊಲೆರೋ ಪಿಕ್‌ ಅಪ್ ವಾಹನಕ್ಕೆ ಲಾರಿಯಲ್ಲಿದ್ದ ಖಾಲಿ ಬ್ರೆಡ್ ಟ್ರೇಗಳನ್ನು ವರ್ಗಾಯಿಸಲಾಗಿದೆ. ನಂತರ ಚಾಲಕನಿಂದ ಬಲವಂತವಾಗಿ ಲಾರಿ ಕೀ ಕಿತ್ತುಕೊಂಡು, ಆತನನ್ನು ಬೊಲೆರೋ ವಾಹನದಲ್ಲಿ ಹತ್ತಿಸಿ ಕಂಪನಿಗೆ ವಾಪಸ್ ಕಳುಹಿಸಲಾಗಿದೆ. ನ್ಯಾಯಾಲಯದ ಆದೇಶವಿದೆ ಎಂದು ಸುಳ್ಳು ಹೇಳಿ ಲಾರಿಯನ್ನು ಕಳವು ಮಾಡಿದ ರಕ್ಷಿತ್ ಮತ್ತು ತಂಡದ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಚಾಲಕರು ಭಯಭೀತರಾಗಿದ್ದಾರೆ. ಹೀಗಾಗಿ. ಎಲ್ಲಾ ವಾಹನ ಚಾಲಕ / ಮಾಲಕರು ಯಾವುದೇ ಕಾರಣಕ್ಕೂ ಈ ರೀತಿಯಾಗಿ ನಂಬಿಸುವಾಗ ಕೂಲಂಕುಷವಾಗಿ ಪರಿಶೀಲಿಸಿಕೊಳ್ಳಿ. ಸ್ಥಳೀಯ ಠಾಣೆಯನ್ನು ಸಂಪರ್ಕಿಸಿ, ತಕ್ಷಣ ಮಾಹಿತಿ ನೀಡಿ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಲಘು ಮಳೆ- 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್‌ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ- ಮಂಗಳೂರು ಮೂಲದ ಯುವ ಟ್ರಕ್ ಚಾಲಕ ಸಾವು

⚠️ Contents are protected on this website.