ಬೆಳ್ತಂಗಡಿ, ಜು. 25 : ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಜು. 25ರಂದು ಉಚಿತ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಗಾರವು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ಶ್ರೀ ವಿವೇಕ ಆಳ್ವ’ರವರು ಮಾತನಾಡಿ ಆಗಸ್ಟ್ 7 ಮತ್ತು 8ರಂದು “ಆಳ್ವಾಸ್ ಪ್ರಗತಿ – 2026 ಬೃಹತ್ ಉದ್ಯೋಗ ಮೇಳ”ವು ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಉದ್ಯೋಗಕಾಂಕ್ಷಿಗಳು ಭಾಗವಹಿಸಬಹುದು. ಆಳ್ವಾಸ್ ಪ್ರಗತಿ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಮಕ್ಕಳಿಗೆ ಉದ್ಯೋಗ ಸಿಗಬೇಕೆಂಬ ದುರಾಸೆಯನ್ನು ನಾವಿಟ್ಟುಕೊಂಡಿಲ್ಲ. ಅಲ್ಲಿ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡಾ ನಮಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಂತೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ’ರವರು, ನಮ್ಮ ತಾಲೂಕಿನ ಯುವ ಸಮೂಹಕ್ಕೆ ಉದ್ಯೋಗ ಸಿಗಬೇಕೇಂಬ ಆಸೆ ನನ್ನದು. ಅದಕ್ಕಾಗಿಯೇ, ಆಳ್ವಾಸ್ ಸಂಸ್ಥೆಯ ಅಧೀನದಲ್ಲಿ ನಾವಿಂದು ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ಮುಂದಿನ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಕಾರ್ಯಗಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತಯಾರಿಯ ತರಭೇತಿಗಳನ್ನು ನಡೆಸುವ ಚಿಂತನೆಯಿದೆ ಎಂದು ಹೇಳಿದರು.
ಮಾರ್ಗದರ್ಶಕರಾಗಿ ಆಗಮಿಸಿದ್ದ ಆಳ್ವಾಸ್ ವಿದ್ಯಾಸಂಸ್ಥೆಯ ಶಿಕ್ಷಕರಾದ ಶ್ರೀ ಕ್ಸೇವಿಯರ್ ಅವರು ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಓರಿಯೆಂಟಷನ್ & ಟ್ರೈನಿಂಗ್, ರೆಸ್ಯೂಮ್ ತಯಾರಿಸುವ ಸರಿಯಾದ ವಿಧಾನ, HR ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ಕೌಶಲ್ಯ, ಗ್ರೂಪ್ ಡಿಸ್ಕಶನ್ ಹಾಗೂ ಕಮ್ಯುನಿಕೇಷನ್ ಸ್ಕಿಲ್ಸ್, ಉದ್ಯೋಗ ಪಡೆಯಲು ಅಗತ್ಯವಾದ ವ್ಯಕ್ತಿತ್ವ ವಿಕಸನದ ಕುರಿತು ತರಭೇತಿ ನೀಡಿದರು.
ವೇದಿಕೆಯಲ್ಲಿ ಸುದ್ದಿ ಬಿಡುಗಡೆಯ ಸಂಸ್ಥಾಪಕರಾದ ಶ್ರೀ ಡಾ. ಶಿವಾನಂದ ಪಿ. ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ಡಾ. ವಿನಾಯಕ್ ಭಟ್ ಗಾಳಿಮನೆ ಅವರು ಸ್ವಾಗತಿಸಿ ಧನ್ಯವಾದವಿತ್ತರು.
ಕಾರ್ಯಗಾರದಲ್ಲಿ ತಾಲೂಕಿನ ಹಲವು ಕಾಲೇಜುಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


