ಬೆಂಗಳೂರು, ಮೇ. 06 : ಐಪಿಎಲ್ ನಲ್ಲಿ 15 ವರ್ಷದ ಕ್ರಿಕೆಟ್ ಸೆನ್ಸೆಶನ್ ವೈಭವ್ ಸೂರ್ಯವಂಶಿ ಆಡುತ್ತಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಸಿ ಎಂ ಶಿವಕುಮಾರ್ ನಾಯಕ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು, ಲೀಗ್‌ನಲ್ಲಿ ಭಾಗವಹಿಸುತ್ತಿರುವ ಹದಿಹರೆಯದ ಆಟಗಾರ “ಬಾಲ ಕಾರ್ಮಿಕ” ಎಂದು ವರ್ಗೀಕರಿಸಿದ್ದಾರೆ.
ಸೂರ್ಯವಂಶಿ ಇತ್ತೀಚೆಗೆ “ವೃತ್ತಿಪರರಲ್ಲದ” ಆರೋಪಗಳಿಂದ ಹಿಡಿದು ಬ್ಯಾಟ್ ನಲ್ಲಿ AI ಚಿಪ್ ಬಗ್ಗೆ ವಿಲಕ್ಷಣ ಹೇಳಿಕೆಗಳವರೆಗೆ ವಿವಿಧ ಸುದ್ದಿಗಳನ್ನು ಎದುರಿಸಿದ್ದರೂ, ಇತ್ತೀಚಿನ ಈ ಕಾನೂನು ಬೆದರಿಕೆ ಅವರ ವಯಸ್ಸು ಮತ್ತು ಹಕ್ಕುಗಳ ಮೇಲೆ ಕೇಂದ್ರೀಕರಿಸಿದೆ.
ಟಿವಿ ಚರ್ಚೆಯ ಸಂದರ್ಭದಲ್ಲಿ, ಬಾಲ ಕ್ರಿಕೆಟಿಗನನ್ನ “ವೃತ್ತಿಪರ ಕ್ರೀಡಾ ವ್ಯವಸ್ಥೆಯು ಅನ್ಯಾಯವಾಗಿ ಶೋಷಿಸುತ್ತಿದೆ. ಅವನು ಕೇವಲ 15 ವರ್ಷ ವಯಸ್ಸಿನ ಬಾಲಕ, ಅವನನ್ನು ವೃತ್ತಿಪರ ಕ್ರಿಕೆಟ್ ಆಡಲು ಐಪಿಎಲ್‌ಗೆ ಕರೆತಂದಿದ್ದಾರೆ. ಇದು ಬಾಲಕಾರ್ಮಿಕ ಪದ್ಧತಿ ಅಲ್ಲದೆ ಬೇರೇನೂ ಅಲ್ಲ. ಅವರು ಅಪ್ರಾಪ್ತ ಬಾಲಕನನ್ನು ಇಂತಹ ದೊಡ್ಡ ಲೀಗ್‌ನಲ್ಲಿ ಹೇಗೆ ಆಡುವಂತೆ ಮಾಡುತ್ತಾರೆ? ಈ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಆಡುವ ಬದಲು ಅವನು ತನ್ನ ಅಧ್ಯಯನದತ್ತ ಗಮನ ಹರಿಸಬೇಕು, ಶಾಲೆಗೆ ಹೋಗಬೇಕು ಮತ್ತು ಶಿಕ್ಷಣವನ್ನು ಪೂರ್ಣಗೊಳಿಸಬೇಕು” ಎಂದು ನಾಯಕ್ ವಾದಿಸಿದ್ದಾರೆ.
“ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಮಕ್ಕಳ ಹಕ್ಕುಗಳು ಮತ್ತು ಬಾಲಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ಆಡಳಿತ ಮಂಡಳಿಯ ವಿರುದ್ಧ ಪೊಲೀಸ್ ದೂರು ಅಥವಾ ಕಾನೂನು ಪ್ರಕರಣ ದಾಖಲಿಸುತ್ತೇನೆ. ಈ ಹುಡುಗನನ್ನು ಐಪಿಎಲ್ ಕ್ರಿಕೆಟ್ ಆಡಲು ಬಿಡಬೇಡಿ, ಇದು ಬಾಲಕಾರ್ಮಿಕ ಪದ್ಧತಿ, ಅವನು ಓದಬೇಕು.”ಎಂದು ಶಿವಕುಮಾರ್ ನಾಯಕ್ ಆಕ್ರೋಶ ಹೊರ ಹಾಕಿದ್ದಾರೆ.

