ಮಂಗಳೂರು : ಕರ್ನಾಟಕದ ಭಾಗ ಕಾಸರಗೋಡಿನಲ್ಲಿ ಮಲಯಾಳೀಕರಣದ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದೆ. ಇದರ ವಿರುದ್ಧ ಡಿಸೆಂಬರ್ 3ನೇ ವಾರದಲ್ಲಿ ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ನಡೆಯಲಿದೆ. ಅಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಬಳಿಕ 3ನೇ ವಾರದಲ್ಲಿ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸುವ ಮೂಲಕ ಸತ್ಯಾಗ್ರಹ ನಡೆಸಲಾಗುವುದು ಎಂದರು. ಕಾಸರಗೋಡನ್ನು ರಾಜ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ಕಯ್ಯಾರ ಕಿಂಞಣ್ಣ ರೈ, ಗೋವಿಂದ ಪೈ ಅವರ ಹೋರಾಟದ ಅನಂತರ ಮುಖಂಡತ್ವ ಬದಿಗೆ ಸರಿದಿದೆ. ವಿಧಾನಸಭೆ, ವಿಧಾನಪರಿಷತ್ತು, ಸಂಸತ್ತಿನಲ್ಲೂ ಮಾತನಾಡುತ್ತಿಲ್ಲ. ಕಾಸರಗೋಡನ್ನು ಮಲಯಾಳೀಕರಣಗೊಳಿಸುವ ಮೂಲಕ ಕನ್ನಡ ಸಂಸ್ಕೃತಿ ನಾಶ ಆಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಲಯಾಳಿ ಉಪಾಧ್ಯಾಯರನ್ನು ನೇಮಕ ಮಾಡಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಇಂದು ಪರ ಭಾಷೆಗಳ ದಾಳಿ ಹೆಚ್ಚಾಗುತ್ತಿದೆ. ಮಂಗಳೂರಿನ ಪರಿಸ್ಥಿತಿ ನೋಡುವಾಗ ಮುಂದೆ ಏನಾಗುವುದೋ ಎಂಬ ಸ್ಥಿತಿ ಇದೆ. ಇಲ್ಲಿನ ಜಮೀನು, ವಿದ್ಯುತ್ ನೀರು ಪಡೆಯುವ ಐಟಿ ಬಿಟಿಯವರು ಉದ್ಯೋಗಕ್ಕೆ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳಿದ ಅವರು ಕಾಸರಗೋಡು ಸಮ್ಮೇಳನದ ಬಳಿಕ ಕಾರವಾರ, ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕನ್ನಡ ಪರ ಹೋರಾಟವನ್ನು ನಡೆಸಲಾಗುವುದು ಎಂದರು. ಇನ್ನು, ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾರ್ಯದರ್ಶಿ ಕುಶಲ ಕುಮಾರ ಕೆ., ಕರ್ನಾಟಕ ಸಮಿತಿ ಕಾಸರಗೋಡು ಅಧ್ಯಕ್ಷ ಕೆ.ಎಂ. ಬಳ್ಳಕ್ಕುರಾಯ, ಕೆ. ಗುರುಪ್ರಸಾದ್ ಕೋಟೆಕಣಿ, ಕೆ. ಜಗದೀಶ್ ಕೂಡ್ಲು, ಶ್ರೀಕಾಂತ ಕಾಸರಗೋಡು, ಸುಕೇಶ್ ಎ. ಉಪಸ್ಥಿತರಿದ್ದರು.

