ಪಂಜಾಬ್, ಜೂ. 09 : ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 300 ರನ್‌ಗಳ ಬೃಹತ್ ಅಂತರದ ಜಯ ಸಾಧಿಸುವ ಮೂಲಕ ಶುಭಮನ್ ಗಿಲ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ದಾಖಲಿಸಿದ ಅತಿ ದೊಡ್ಡ ವಿಜಯವಾಗಿದೆ. ಹೀಗಾಗಿ ವಿಕಾಟ್ ಕೊಹ್ಲಿ ಪಡೆಯು 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ದಾಖಲಿಸಿದ್ದ ಇನ್ನಿಂಗ್ಸ್ ಮತ್ತು 272 ರನ್ ಗಳ ಅಂತರದ ಗೆಲುವೇ ಅತಿ ದೊಡ್ಡ ವಿಜಯವಾಗಿತ್ತು. ಇದನ್ನು ಈಗ ಶುಭಮನ್ ಗಿಲ್ ನನೇತೃತ್ವದ ತಂಡ ಮೆಟ್ಟಿ ನಿಂತಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಜೂನ್ 8ರ ಸೋಮವಾರದಂದೇ ಪಂದ್ಯ ಮುಕ್ತಾಯಗೊಂಡಿದ್ದು, ಆತಿಥೇಯ ಭಾರತ ತಂಡ ಆರಂಭದಿಂದ ಕೊನೆಯವರೆಗೂ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಮೊದಲ ದಿನದಂದು ಟಾಸ್ ಗೆದ್ದ ಗಿಲ್ ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರ ಅಮೋಘ ಶತಕಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 564 ರನ್‌ಗಳ ದೂಡ್ಡ ಮೊತ್ತ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೆ.ಎಲ್. ರಾಹುಲ್ ಭರ್ತಿ 100 ಗಳಿಸಿದರೆ, ಶುಭಮನ್ ಗಿಲ್ ಅವರು 126 ರನ್ ಗಳಿಸಿ ಔಟಾದರು. ಆ ಬಳಿಕ ಸಾಯಿ ಸುದರ್ಶನ್(81) ರಿಷಭ್ ಪಂತ್ (81) ಮತ್ತು ವಾಷಿಂಗ್ಟನ್ ಸುಂದರ್ (51) ಅರ್ಧಶತಕ ಗಳಿಸಿ ಬೃಹತ್ ಮೊತ್ತಕ್ಕೆ ಯೋಗದಾನ ನೀಡಿದರು.
ತದನಂತರ ಮೊದಲ ಇನಿಂಗ್ಸ್ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ, ಪದಾರ್ಪಣೆ ಪಂದ್ಯವಾಡಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರ 6 ವಿಕೆಟ್‌ಗಳ ಮಾರಕ ದಾಳಿಗೆ ಸಿಲುಕಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ಕನ್ನಡಿಗ ಪ್ರಸಿದ್ಧ ಕೃಷ್ಣ ಸಹ 3 ವಿಕೆಟ್ ಗಳಿಸಿದರು. 412 ರನ್ ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಗೆ ಗುರಿಯಾದ ಅಫ್ಘಾನಿಸ್ತಾನ ತಂಡ ಅದಕ್ಕಿಂತಲೂ ಕಡಿಮೆ ಮೊತ್ತಕ್ಕೆ ಅಂದರೆ 112 ರನ್ ಗಳಿಗೆ ಆಲೌಟ್ ಆಯಿತು. ವಾಶಿಂಗ್ಟನ್ ಸುಂದರ್ ಅವರು 36ಕ್ಕೆ 4 ವಿಕೆಟ್ ಮತ್ತು ಕುಲ್ದೀಪ್ ಯಾದವ್ ಅವರು 3 ವಿಕೆಟ್ ಗಳಿಸಿದರು. ಒಟ್ಟಾರೆ ಭಾರತದ ಸ್ಪಿನ್ನರ್ ಗಳೇ ಅಫ್ಘಾನಿಸ್ತಾನದ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಪದಾರ್ಪಣೆ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿದ ಮಾನವ ಸುತಾರ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮೊದಲ ಬಾರಿ 300 ರನ್ ಗೆಲುವು
ಈ ಫಲಿತಾಂಶದೊಂದಿಗೆ ಭಾರತ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತನ್ನ ಅತ್ಯಂತ ದೊಡ್ಡ ಇನಿಂಗ್ಸ್ ಜಯವನ್ನು ದಾಖಲಿಸಿದೆ. ಭಾರತ ತಂಡವು ಇನಿಂಗ್ಸ್ ಮತ್ತು 300 ರನ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮುನ್ನ 2018ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಾಖಲಿಸಿದ್ದ ಜಯವೇ ಭಾರತದ ಅತಿ ದೊಡ್ಡ ಇನಿಂಗ್ಸ್ ಗೆಲುವಿನ ದಾಖಲೆಯಾಗಿತ್ತು.
ಮತ್ತೊಂದೆಡೆ, ಇದು ಅಫ್ಘಾನಿಸ್ತಾನ ಟೆಸ್ಟ್ ಇತಿಹಾಸದಲ್ಲೇ ಅನುಭವಿಸಿದ ಅತ್ಯಂತ ಹೀನಾಯ ಸೋಲಾಗಿದೆ. ಇದರೊಂದಿಗೆ ಭಾರತ ತಂಡ ತನ್ನದೇ ಹಳೆಯ ವಿಶ್ವದಾಖಲೆಯನ್ನು ಮುರಿದಿದೆ. ಅಫ್ಘಾನ್ ತಂಡ ತನ್ನ ಟೆಸ್ಟ್ ಇತಿಹಾಸದಲ್ಲಿ ಇನಿಂಗ್ಸ್ ಸೋಲು ಕಂಡಿರುವುದು ಇದು ಕೇವಲ ಮೂರನೇ ಬಾರಿ ಮಾತ್ರ. ವಿಶೇಷವೆಂದರೆ, ಇದರಲ್ಲಿ ಎರಡು ಬಾರಿ ಅವರು ಭಾರತದ ವಿರುದ್ಧವೇ ಇನಿಂಗ್ಸ್ ಸೋಲೊಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಟೆಸ್ಟ್ ಕ್ರಿಕೆಟ್‌ನ 149 ವರ್ಷಗಳ ಇತಿಹಾಸದಲ್ಲಿ ಇನಿಂಗ್ಸ್ ಮತ್ತು 300 ರನ್‌ಗಳ ಅಂತರದಿಂದ ಪಂದ್ಯ ಗೆದ್ದ ವಿಶ್ವದ ಕೇವಲ 10ನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹಾಗೂ 21ನೇ ಶತಮಾನದಲ್ಲಿ ಈ ಬೃಹತ್ ಅಂತರದಿಂದ ಪಂದ್ಯ ಗೆದ್ದ 4ನೇ ತಂಡ ಎನಿಸಿಕೊಂಡಿದೆ. ವಾಸ್ತವವಾಗಿ, ಇಂದಿನ ಈ ಫಲಿತಾಂಶವು ಕಳೆದ 14 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತ್ಯಂತ ದೊಡ್ಡ ಗೆಲುವಾಗಿದೆ. ಇಂದು ಗಿಲ್ ಪಡೆ ಸಾಧಿಸಿದ ದಾಖಲೆಗಿಂತ ದೊಡ್ಡ ಅಂತರದ ಜಯವನ್ನು ಕೊನೆಯದಾಗಿ 2012 ರಲ್ಲಿ ಮತ್ತೊಂದು ತಂಡ ದಾಖಲಿಸಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ ಪ್ರಥಮ ಇನ್ನಿಂಗ್ಸ್ 127 ಓವರ್ ಗಳಲ್ಲಿ 564/8ಡಿ. ಶುಭಮನ್ ಗಿಲ್ 126, ಕೆಎಲ್ ರಾಹುಲ್ 100, ಸಾಯಿ ಸುದರ್ಶನ್ 81, ರಿಷಬ್ ಪಂತ್ 81, ವಾಶಿಂಗ್ಟನ್ ಸುಂದರ್ ಅಜೇಯ 52, ಮೊಹಮ್ಮದ್ ಸಲೀಂ 140ಕ್ಕೆ 6.
ಅಫ್ಘಾನಿಸ್ತಾನ ಪ್ರಥಮ ಇನ್ನಿಂಗ್ಸ್ 58.4 ಓವರ್ ಗಳಲ್ಲಿ 152, ರಹ್ಮತ್ ಶಾ 60, ಹಶ್ಮತುಲ್ಲಾ ಶಹಿದಿ 20, ಸಾದಿಕುಲ್ಲಾ ಅಟಲ್ 17, ಮಾನವ್ ಸುತಾರ್ 33ಕ್ಕೆ 6, ಪ್ರಸಿದ್ಧ ಕೃಷ್ಣ 37ಕ್ಕೆ 3.
ಅಫ್ಘಾನಿಸ್ತಾನ ದ್ವಿತೀಯ ಇನ್ನಿಂಗ್ಸ್ 35.5 ಓವರ್ ಗಳಲ್ಲಿ 112, ಸಾದಿಕುಲ್ಲಾ ಅಟಲ್ 42, ರಹ್ಮಾನುಲ್ಲಾ ಗುರ್ಬಾಝ್ 24, ರಹ್ಮತ್ ಶಾ 13, ವಾಶಿಂಗ್ಟನ್ ಸುಂದರ್ 36ಕ್ಕೆ 4, ಕುಲ್ದೀಪ್ ಯಾದವ್ 30ಕ್ಕೆ 3.


