ಬೆಳ್ತಂಗಡಿ, ನ. 12 : ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಹದಗೆಟ್ಟ ರಸ್ತೆಗಳ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕಲ್ಲೇರಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ನೂರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಿತು.
ಇಳಂತಿಲ, ತಣ್ಣೀರುಪಂತ, ಬಾರ್ಯ, ತೆಕ್ಕಾರು ಮತ್ತು ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರನ್ನು ಒಗ್ಗೂಡಿಸಿ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆಯಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಎಂಬ ಘೋಷಣೆಯೊಂದಿಗೆ ಕರಾಯದಿಂದ ಕಲ್ಲೇರಿಯವರೆಗೆ ಪಾದಯಾತ್ರೆ ನಡೆಯಿತು.

ಒಂಭತ್ತು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ – ಪೂಂಜಾ
ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು,ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಯ ದುಸ್ಥಿತಿಯ ಬಗ್ಗೆ ಕಳೆದ ಮೂರೂವರೆ ವರ್ಷಗಳಲ್ಲಿ ಒಟ್ಟು ಒಂಭತ್ತು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದರು.
ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಮತ್ತು ಪ್ರತಿ ವಾರ ಬೆಂಗಳೂರಿಗೆ ತೆರಳಿ ಕಡತಗಳ ಫಾಲೋ-ಅಪ್ ಮಾಡುತ್ತಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಆದೇಶ ಹೊರಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನವೆಂಬರ್ ತಿಂಗಳ ಒಳಗಾಗಿ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಬೇಕು. ತಪ್ಪಿದ್ದಲ್ಲಿ ವಿಧಾನಸೌಧದ ಮುಂಭಾಗ ಹಾಗೂ ಲೋಕೋಪಯೋಗಿ ಸಚಿವರ ಕಚೇರಿ ಎದುರು ತಾವೊಬ್ಬರೇ ಏಕಾಂಗಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಇದೇ ವೇಳೆ ಗುರುವಾಯನಕೆರೆ – ಮೂಡಬಿದಿರೆ (ಹೊಸಂಗಡಿ) ರಸ್ತೆಗೂ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ದ್ವಾರ, ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಪ್ರಭಾರಿ ಕವಿತಾ ಸನಿಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಟಿ., ಪ್ರಜ್ವಲ್, ಪ್ರಶಾಂತ್ ಪಾರೆಂಕಿ, ಮನ್ ಕಿ ಬಾತ್ ಪ್ರಮುಖ್ ಸೀತಾರಾಮ ಬೆಳಾಲು, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಕಣಿಯೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಹಾಗೂ ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

