ಸಕಲೇಶಪುರ : ಅಂಬಾರಿ ಆನೆ ಅರ್ಜುನ ಸ್ಮಾರಕ ನಿರ್ಮಾಣವಾದರೂ ಲೋಕಾರ್ಪಣೆ ಭಾಗ್ಯವಿಲ್ಲ ! ಸರ್ಕಾರಕ್ಕೆ ಏಕೆ ನಿರ್ಲಕ್ಷ್ಯ ?

ಸಕಲೇಶಪುರ, ಡಿ. 18 : ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಗೂ ಪ್ರತಿಮೆ ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2023 ರ ಡಿ.4 ರಂದು ಸಕಲೇಶಪುರ ತಾಲೂಕಿನ ಯಸಳೂರು ಸಮೀಪ ಮೀಸಲು ಅರಣ್ಯ ದಬ್ಬಳೆಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ತೀವ್ರ ರಕ್ತಸ್ರಾವವಾಗಿ ಬೃಹತ್‌ ಗಾತ್ರದ ಅರ್ಜುನ ಮೃತಪಟ್ಟಿದ್ದ. ವೀರ ಮರಣಕ್ಕೂ ಮುನ್ನ ಜತೆಯಲ್ಲಿದ್ದ ಎರಡು ಸಾಕಾನೆಗಳು ಓಡಿ ಹೋದರೂ ಭಯಪಡದೆ ಏಕಾಂಗಿಯಾಗಿ ಕಾಡಾನೆ ಜತೆ ಕಾದಾಟ ನಡೆಸಿದ ಅರ್ಜುನನ ಹೋರಾಟದ ಗುಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.

Advertisement

ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿರುವುದು ಹಾಗೂ ಮೂರು ದಿನಗಳ ಹಿಂದಷ್ಟೇ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬಳಲಿದ್ದ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿದ್ದಕ್ಕೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅರ್ಜುನ ಮೃತಪಟ್ಟ ಅರಣ್ಯ ಪ್ರದೇಶದಲ್ಲಿಅಂದು ಸಮಾಧಿ ಮಾಡಲಾಗಿತ್ತು. ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಆಗಮಿಸಿ ಅರ್ಜುನನ ಪ್ರತಿಮೆ ನಿರ್ಮಿಸುವ ಭರವಸೆ ನೀಡಿದ್ದರು. ಇದೀಗ ಎರಡು ವರ್ಷವಾದರೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ವರ್ಷದ ಹಿಂದೆ ಕಾಮಗಾರಿ ಪೂರ್ಣವಾಗದಿದ್ದರೂ ತರಾತುರಿಯಲ್ಲಿ ಸ್ಮಾರಕ ಉದ್ಘಾಟನೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಸ್ಥಳೀಯ ಶಾಸಕ ಸಿಮೆಂಟ್‌ ಮಂಜು, ಸ್ಥಳೀಯ ಜನಪರ ಹೋರಾಟ ಸಂಘಟನೆ ತೀವ್ರ ಹೋರಾಟ ನಡೆಸಿದ ನಂತರ ಉದ್ಘಾಟನೆಯನ್ನು ಕೈ ಬಿಡಲಾಗಿತ್ತು. ಪ್ಲಾಸ್ಟಿಕ್‌ ಮೆಟಲ್‌ ಇರುವ ಅರ್ಜುನನ ಪ್ರತಿಮೆಯನ್ನು ಸಮಾಧಿ ಸ್ಥಳಕ್ಕೆ ತಂದು ಒಂದು ವರ್ಷ ಕಳೆದಿದ್ದು ಪ್ಲಾಸ್ಟಿಕ್‌ ಕವರ್‌ನಿಂದ ಮುಚ್ಚಲಾಗಿದೆ. ಸದ್ಯ ಸಾರ್ವಜನಿಕರಿಗೆ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ತಾಲೂಕಿನ ಉಚ್ಚಂಗಿ-ಚಿಕ್ಕಂದೂರು ಮಾರ್ಗವಾಗಿ ದಟ್ಟಾರಣ್ಯದಲ್ಲಿ ಸ್ಮಾರಕ ಸ್ಥಳಕ್ಕೆ ಹೋಗಬೇಕಾಗಿದ್ದು ಕಚ್ಚಾ ರಸ್ತೆಯಲ್ಲಿ ಕಲ್ಲುಗಳೇ ತುಂಬಿದೆ. ಉತ್ತಮ ರಸ್ತೆಯೂ ಇಲ್ಲ. ಕಾಡಾನೆ ಉಪಟಳ ತಡೆಗೆ ಸ್ಮಾರಕ ಸುತ್ತಾ ಸೋಲಾರ್‌ ಬೇಲಿ ಹಾಕಲಾಗಿದೆ. ಸುಮಾರು 500 ಮೀಟರ್‌ ದೂರದಲ್ಲಿ ಕಂಟೇನರ್‌ ಶೌಚಾಲಯವಿದ್ದು ಮಳೆಗೆ ನೆನೆದು ತುಕ್ಕು ಹಿಡಿಯುತ್ತಿದೆ. ಸ್ಮಾರಕ ಸ್ಥಳದಲ್ಲಿನ ಅವ್ಯವಸ್ಥೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರಕಾರ ಭರವಸೆ ನೀಡಿದಂತೆ ಶೌಚಾಲಯ, ಕಲ್ಲಿನ ಕುರ್ಚಿಗಳು, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಶೌಚಾಲಯವನ್ನು ಕಂಟೇನರ್‌ ತಂದಿರುವುದು ಅರಣ್ಯ ಇಲಾಖೆ ಏನು ಮಾಡಲು ಹೊರಟಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ನೀಲಗಿರಿ ತೋಪಿನ ಮಧ್ಯದಲ್ಲಿರುವ ಈ ಪ್ರದೇಶಕ್ಕೆ ರಾತ್ರಿ ಸಮಯದಲ್ಲಿ ಕಾಡಾನೆಗಳು ಆಗಮಿಸುತ್ತವೆ. ಸೋಲಾರ್‌ ಬೆಳಕಿನ ವ್ಯವಸ್ಥೆ ಇದ್ದರೂ ಈ ಹಿಂದೆ ಸ್ಮಾರಕ ಸ್ಥಳದಲ್ಲಿ ದಾಂಧಲೆ ಮಾಡಿವೆ. ಸ್ಮಾರಕ ಉದ್ಘಾಟನೆಗೊಂಡರೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಯಾವುದೇ ರಕ್ಷಣೆ ಇಲ್ಲದೆ ಅಪಾಯ ಎದುರಾದರೆ ಹೊಣೆ ಯಾರು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ವೀರ ಮರಣವನ್ನಪ್ಪಿದ ಅರ್ಜುನನ ಸ್ಮಾರಕ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿ ಎಂಬುದು ಲಕ್ಷಾಂತರ ಅಭಿಮಾನಿಗಳ ಆಸೆ. ಆದರೆ, ಸರ್ಕಾರಕ್ಕೆ ಇದರ ಬಗೆಗಿನ ಉತ್ಸಾಹವೇ ಕಾಣುತ್ತಿಲ್ಲ. ಉದ್ಘಾಟನೆಯಾದ ಬಳಿಕ ಸೂಕ್ತ ನಿರ್ವಹಣೆ ಇಲ್ಲದೇ ಇದ್ದಲ್ಲಿ ಮುಂದೇನು ಎಂಬುದು ಕೂಡಾ ಯಕ್ಷ ಪ್ರಶ್ನೆಯಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

⚠️ Contents are protected on this website.