ಬೆಂಗಳೂರು : ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜು ಸದ್ಯ ನಿರಾಳ – ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಬೆಂಗಳೂರು, ಡಿ. 27 : ರೌಡಿ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಒಂದು ವೇಳೆ ಬಸವರಾಜು ಬಂಧನವಾದರೆ ತಕ್ಷಣ ಬಿಡುಗಡೆ ಮಾಡಬೇಕು, ಅವರು ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Advertisement

ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ ಕ್ರಮ ಪ್ರಶ್ನಿಸಿ ಬೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾ.ಜಿ. ಬಸವರಾಜು ಅವರಿದ್ದ ರಜಾಕಾಲದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಂತರ ಈ ಮಧ್ಯಂತರ ಆದೇಶ ಹೊರಡಿಸಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ”ಸಿಐಡಿ ಪೊಲೀಸರು ನೋಟಿಸ್‌ ನೀಡಿದಾಗ ಬೈರತಿ ಬಸವರಾಜು ತನಿಖೆಗೆ ಹಾಜರಾಗಿದ್ದಾರೆ. ಆದರೆ, ಅವರ ವಿರುದ್ಧ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಆರೋಪ ಪಟ್ಟಿ ಸಲ್ಲಿಸದಿರುವುದಕ್ಕೆ ತನಿಖಾಧಿಕಾರಿ ಸಮಂಜಸ ಕಾರಣ ನೀಡಿಲ್ಲ. ಜುಲೈ 18ರಿಂದ ಡಿ.19 ರವರೆಗೆ ಬಂಧನದಿಂದ ರಕ್ಷಣೆಯಿತ್ತು. ಹಾಗಾಗಿ, ಸದ್ಯ ಆ ರಕ್ಷಣೆಯನ್ನು ಮುಂದುವರಿಸಲಾಗುವುದು,” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಂದೇಶ್‌ ಚೌಟ, ”ಪ್ರಕರಣದ ಸಂಬಂಧ ಅರ್ಜಿದಾರರಿಗೆ 5 ತಿಂಗಳು 10 ದಿನ ಹೈಕೋರ್ಟ್‌ನ ಮಧ್ಯಂತರ ರಕ್ಷಣೆ ಇತ್ತು. ಅದೇ ರಕ್ಷಣೆ ಮುಂದುವರಿಸಬೇಕು. ಈ ಹಿಂದೆಯೂ ಹೈಕೋರ್ಟ್‌ ಬಂಧಿಸದಂತೆ ಆದೇಶಿಸಿತ್ತು. ಸೂಕ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್‌ ಸೂಚಿಸಿತ್ತು. ಆದರೆ, ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ,” ಎಂದರು. ಅಲ್ಲದೆ, “ರಾಜಕೀಯ ಕಾರಣಕ್ಕೆ ಪ್ರಕರಣದಲ್ಲಿ ಅರ್ಜಿದಾರರನ್ನು ಸಿಲುಕಿಸಲು ಯತ್ನ ನಡೆಸಲಾಗಿದೆ. ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ. ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಬಳಿಕ ಬಂಧಿಸಲು ಯತ್ನಿಸಲಾಗುತ್ತಿದೆ,” ಎಂದು ಬೈರತಿ ಬಸವರಾಜು ಪರವಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ಸರಕಾರಿ ವಕೀಲರು, “ಪ್ರಕರಣದಲ್ಲಿಎಸ್‌ಪಿಪಿಯಾಗಿ ಬಿ.ಎನ್‌. ಜಗದೀಶ್‌ ನೇಮಕವಾಗಿದೆ. ಅವರಿಗೆ ಜಾಮೀನು ಅರ್ಜಿ ತಲುಪಿಲ್ಲ. ಎಸ್‌ಪಿಪಿ ವಿದೇಶಕ್ಕೆ ತೆರಳಿರುವುದರಿಂದ ವಿಚಾರಣೆ ಮುಂದೂಡಬೇಕು,” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ

ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ರೌಡಿಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆ ಆರೋಪದ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಐದನೇ ಆರೋಪಿ ಬಸವರಾಜು ಮತ್ತು 20ನೇ ಆರೋಪಿ ವಿರುದ್ಧ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿ ಇನ್ನುಳಿದ 18 ಮಂದಿಯ ವಿರುದ್ಧ 4236 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಬಸವರಾಜು ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿತ್ತು. ಹಾಗಾಗಿ, ಅವರು ಮತ್ತೆ ಹೈಕೋರ್ಟ್‌ನ ಮೊರೆ ಹೋಗಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

⚠️ Contents are protected on this website.