ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು, ಏ. 20 : ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಬ್ಯಾಂಕ್‌ಗಳು ನೀಡುವ ಕಂಪ್ಯೂಟರ್‌ ಆಧಾರಿತ ‘ರಿಟರ್ನ್ ಮೆಮೊ’ಗಳಲ್ಲಿ (ಚೆಕ್ ಅಮಾನ್ಯಗೊಂಡ ಬಗ್ಗೆ ಬ್ಯಾಂಕ್ ನೀಡುವ ಚೀಟಿ) ಬ್ಯಾಂಕ್ ಅಧಿಕಾರಿಗಳ ಸಹಿ ಅಥವಾ ಅಧಿಕೃತ ಸೀಲು ಇಲ್ಲ ಎಂಬ ಏಕೈಕ ಕಾರಣಕ್ಕೆ ಕ್ರಿಮಿನಲ್ ದೂರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Advertisement

ಬೆಂಗಳೂರಿನ ಆರ್. ಜಗದೀಶ್ ಎಂಬುವವರು ಆದಿತ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಈ ಸಾಲಕ್ಕೆ ಖಾತರಿಯಾಗಿ ಅವರು ಮುಂದಿನ ದಿನಾಂಕದ ಚೆಕ್ ನೀಡಿದ್ದರು. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸೊಸೈಟಿಯು ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಗದೀಶ್ ಅವರನ್ನು ದೋಷಿ ಎಂದು ಘೋಷಿಸಿ, 4 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಜಗದೀಶ್ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಎಲೆಕ್ಟ್ರಾನಿಕ್ ಯುಗದಲ್ಲಿ ಸೀಲು-ಸಹಿ ಕಡ್ಡಾಯವಲ್ಲ :

ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿ ಮಹತ್ವದ ವೀಕ್ಷಣೆ ಮಾಡಿದೆ. “ಪ್ರಸ್ತುತ ದಿನಗಳಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ವಿಧಾನದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಂಪ್ಯೂಟರ್ ಮೂಲಕ ಸಿದ್ಧವಾಗುವ ಬ್ಯಾಂಕ್ ರಿಟರ್ನ್ ಮೆಮೊಗಳಿಗೆ ಹಸ್ತಚಾಲಿತ ಸಹಿ ಅಥವಾ ಬ್ಯಾಂಕಿನ ಅಧಿಕೃತ ಮುದ್ರೆ ಕಡ್ಡಾಯವಲ್ಲ. ಈ ತಾಂತ್ರಿಕ ಕಾರಣಗಳನ್ನು ಒಡ್ಡಿ ಚೆಕ್ ಬೌನ್ಸ್ ದೂರನ್ನು ತಿರಸ್ಕರಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಸಾಲದ ಹೊಣೆಗಾರಿಕೆ ಮತ್ತು ಚೆಕ್ ದುರ್ಬಳಕೆಯ ವಾದ

ಆರೋಪಿ ಜಗದೀಶ್ ಅವರು “ತಾನು ನೀಡಿದ್ದ ಖಾಲಿ ಚೆಕ್ ಅನ್ನು ಸೊಸೈಟಿಯು ದುರ್ಬಳಕೆ ಮಾಡಿಕೊಂಡಿದೆ ಮತ್ತು ತಾನು ಈಗಾಗಲೇ ಸಾಲ ತೀರಿಸಿದ್ದೇನೆ” ಎಂದು ವಾದಿಸಿದ್ದರು. ಆದರೆ, ಸಾಲ ತೀರಿಸಿದ ಬಗ್ಗೆ ಯಾವುದೇ ದಾಖಲೆಗಳನ್ನು ಒದಗಿಸಲು ಅವರು ವಿಫಲರಾಗಿದ್ದರು. “ಚೆಕ್ ತನ್ನದೇ ಮತ್ತು ಅದರಲ್ಲಿರುವ ಸಹಿ ಕೂಡ ತನ್ನದೇ ಎಂದು ಒಪ್ಪಿಕೊಂಡ ಮೇಲೆ, ವರ್ಗಾವಣೆಯ ಲಿಖಿತಗಳ ಅಧಿನಿಯಮದ ಸೆಕ್ಷನ್ 139ರ ಅಡಿ ದೂರುದಾರರ ಪರವಾಗಿ ಕಾನೂನುಬದ್ಧ ಸಾಲದ ಅಸ್ತಿತ್ವದ ಬಗ್ಗೆ ಇರುವ ಅನುಮಾನಕ್ಕೆ ಆಸ್ಪದವಿಲ್ಲ” ಎಂದು ಕೋರ್ಟ್ ತಿಳಿಸಿದೆ.

ಆರೋಪಿಯ ನಿರ್ಲಕ್ಷ್ಯ

“ಒಂದು ವೇಳೆ ಸಾಲ ತೀರಿಸಿದ್ದೇ ಆದಲ್ಲಿ, ನೀಡಿದ್ದ ಖಾಲಿ ಚೆಕ್‌ಗಳನ್ನು ವಾಪಸ್ ಪಡೆಯಲು ಆರೋಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಚೆಕ್ ದುರ್ಬಳಕೆಯಾಗಿದೆ ಎಂದು ದೂರುದಾರರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಹೀಗಾಗಿ ಆರೋಪಿಯ ವಾದವನ್ನು ನಂಬಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಅಂತಿಮ ಆದೇಶ ಏನು?

ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್, ಆರೋಪಿಗೆ ವಿಧಿಸಲಾಗಿದ್ದ 4 ಲಕ್ಷ ರೂ. ದಂಡದ ಆದೇಶವನ್ನು ಸಮರ್ಥಿಸಿತು. ದಂಡದ ಮೊತ್ತದಲ್ಲಿ 3.95 ಲಕ್ಷ ರೂ. ದೂರುದಾರ ಸೊಸೈಟಿಗೆ ಪರಿಹಾರವಾಗಿ ನೀಡಬೇಕು ಮತ್ತು 5,000 ರೂ. ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿದೆ. ಸಾಮಾನ್ಯವಾಗಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಾಂತ್ರಿಕ ದೋಷಗಳನ್ನು ಮುಂದಿಟ್ಟುಕೊಂಡು ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬ್ಯಾಂಕ್ ಮೆಮೊದಲ್ಲಿ ಸೀಲು ಇಲ್ಲ ಎಂಬ ವಾದವನ್ನು ಈ ತೀರ್ಪು ಬದಿಗೊತ್ತಿರುವುದರಿಂದ, ಇನ್ಮುಂದೆ ಡಿಜಿಟಲ್ ಪುರಾವೆಗಳಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮಡಿಕೇರಿ : ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು – ಕೇರಳದ ಮದರಸವೊಂದರಲ್ಲಿ ಪತ್ತೆ ! ಲವ್ ಜಿಹಾದ್‌ ಆರೋಪ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಾಯ್ ಫ್ರೆಂಡ್ ಜೊತೆ ಸಲುಗೆಯಿಂದಿದ್ದಳು ಎಂದು ಸ್ನೇಹಿತೆಯ ಖಾಸಗಿ ಫೊಟೋ ವೈರಲ್ – ಶ್ವೇತಾ ಅರೆಸ್ಟ್ !

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಹಳಿ ಅಭಿವೃದ್ಧಿಗೆ ಜಂಟಿ ಸಮೀಕ್ಷೆ – ಕ್ಯಾ. ಚೌಟ

⚠️ Contents are protected on this website.