ಬೆಂಗಳೂರು, ಜ.19 : ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದ ಡಿಜಿಪಿ ಡಾ.ಕೆ. ರಾಮಚಂದ್ರ ರಾವ್ ಅವರದ್ದೆನ್ನಲಾದ ರಾಸಲೀಲೆಗಳ ವಿಡಿಯೋಗಳು ಬಹಿರಂಗವಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಡಾ.ಕೆ.ರಾಮಚಂದ್ರ ರಾವ್ ಅವರು 1993 ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಭಾರೀ ಸದ್ದು ಮಾಡಿದ ಬಳಿಕ ತನಿಖೆಯಲ್ಲಿ ಪಾರದರ್ಶಕತೆಗಾಗಿ ಸರಕಾರ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು.
2025 ರ ಆಗಸ್ಟ್ ನಲ್ಲಿ ರಾಜ್ಯ ಸರ್ಕಾರವು ಅವರ ಕಡ್ಡಾಯ ರಜೆಯನ್ನು ಹಿಂತೆಗೆದುಕೊಂಡು ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿ ನೇಮಿಸಿತ್ತು. ಇದೀಗ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಕೆಲವು ವಿಡಿಯೋಗಳು ವೈರಲ್ ಆಗಿದೆ. ಲಭ್ಯ ಮಾಹಿತಿಯ ಪ್ರಕಾರ, ಈ ದೃಶ್ಯಾವಳಿಗಳನ್ನು ಡಿಜಿಪಿ ಕಚೇರಿಯೊಳಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು, ಡಾ. ರಾವ್ ಅವರು ಅಧಿಕೃತ ಕೆಲಸದ ಅವಧಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ವಿಭಿನ್ನ ಸಂದರ್ಭಗಳಲ್ಲಿ ಕಚೇರಿಗೆ ಮಹಿಳೆಯರು ಭೇಟಿ ನೀಡಿದ್ದ ವೇಳೆ ಪ್ರತಿ ಬಾರಿಯೂ ಬೇರೆ ಬೇರೆ ಉಡುಗೆ ತೊಟ್ಟಿರುವ ವಿಡಿಯೋಗಳು ಬಹಿರಂಗವಾಗಿದೆ. ಪೊಲೀಸ್ ಸಮವಸ್ತ್ರ ತೊಟ್ಟಿರುವಾಗಲೂ ರಾಮಚಂದ್ರ ರಾವ್ ತಬ್ಬಿಕೊಂಡು ಮುತ್ತಿಕ್ಕುತ್ತಿರುವುದನ್ನು ಬಹಿರಂಗಗೊಂಡ ವೀಡಿಯೋಗಳಲ್ಲಿ ಕಾಣಬಹುದಾಗಿದೆ.

