ಫಿಪಾ ವಿಶ್ವಕಪ್, ಜು. 20 : ಫೆರಾನ್ ಟೊರೆಸ್ ಅವರ ಏಕೈಕ ಗೋಲು ಅರ್ಜೆಂಟೀನಾದ ಸತತ ಎರಡನೇ ಫಿಫಾ ವಿಶ್ವಕಪ್ ಕನಸಿಗೆ ತಣ್ಣೀರೆರಚಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿದ ಸ್ಪೇನ್ ತಂಡ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದೆ.
ಸ್ಪೇನ್ ತಂಡ ಈ ಹಿಂದೆ 2010ರಲ್ಲಿ ನೆದರ್ಲೆಂಡ್ಸ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ಚಾಂಪಿಯನ್ ಎನ್ನಿಸಿಕೊಂಡಿತ್ತು. ಇದೀಗ 16 ವರ್ಷಗಳ ಬಳಿಕ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಪುರುಷರ ಮತ್ತು ಮಹಿಳೆಯರ ಫುಟ್ಬಾಲ್ ಎರಡರಲ್ಲೂ ಏಕಕಾಲಕ್ಕೆ ವಿಶ್ವಕಪ್ ಹೊಂದಿರುವ ಜಗತ್ತಿನ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇದೀಗ ಸ್ಪೇನ್ ಪಾತ್ರವಾಗಿದೆ.
ಜೂನ್ 19ರ ಭಾನುವಾರದಂದು ನ್ಯೂಜೆರ್ಸಿಯ ಮೆಟ್ ಲೈಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಿಂದಲೇ ಸ್ಪೇನ್ ತಂಡ ಆಕ್ರಮಣಕಾರಿ ಆಟವಾಡಿತು. ಆದರೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ಆಟಗಾರರು ಮಾತ್ರ ಸ್ಪೇನ್ ದಾಳಿಯನ್ನು ಗೋಲಾಗಿ ಪರಿವರ್ತಿಸುವುದನ್ನು ತಡೆದರೇ ಹೊರತು ಪ್ರತಿದಾಳಿ ಸಂಘಟಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು.
ಸ್ಪೇನ್ ತಂಡದ ಫಾರ್ವರ್ಡ್ ಆಟಗಾರ ಲ್ಯಾಮಿನೆ ಯಮಲ್ ತಮಗೆ ದೊರೆತ ಪಾಸ್ ಒಂದನ್ನು ಗೋಲ್ ಪೋಸ್ಟ್ ನತ್ತ ಬಲವಾಗಿ ಹೊಡೆಯುತ್ತಾರೆ . ಆದರೆ ಅರ್ಜೆಂಟೀನಾ ಗೋಲ್ ಕೀಪರ್ ಎಮಿಲಾನೊ ಮಾರ್ಟಿನಾಝ್ ಅವರು ಚೆಂಡನ್ನು ಸುರಕ್ಷಿತವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಯಮಲ್ ಅವರ ಪ್ರಯತ್ನಕ್ಕೆ ತಣ್ಣೀರೆರಚುತ್ತಾರೆ. ಇಲ್ಲವಾದಲ್ಲಿ ಆರಂಭದಲ್ಲೇ ಸ್ಪೇನ್ ಗೆ ಪಂದ್ಯದಲ್ಲಿ ಹಿಡಿತ ಸಾಧಿಸುವ ಎಲ್ಲಾ ಅವಕಾಶಗಳಿದ್ದವು. ಆ ಬಳಿಕವೂ ಸ್ಪೇನ್ ಆಟಗಾರರ ಎಲ್ಲಾ ಪ್ರಯತ್ನಗಳನ್ನು ಮಾರ್ಟಿನಾಝ್ ಅವರು ವಿಫಲಗೊಳಿಸುತ್ತಾರೆ.
ಮೊದಲ ಹೈಡ್ರೇಶನ್ ಬ್ರೇಕ್‌ಗೆ ವೇಳೆ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದರೂ ಸ್ಪೇನ್ ತಂಡ ಮಾತ್ರ ನಿರಂತರ ದಾಳಿ ಮುಂದುವರಿಸುತ್ತದೆ. ಮತ್ತೊಂದೆಡೆ, ಅರ್ಜೆಂಟೀನಾ ಒಮ್ಮೆಯೂ ಸ್ಪೇನ್ ಅನ್ನು ಮುರಿಯಲು ಸಫಲವಾಗುವುದಿಲ್ಲ. ಪ್ರಥಮಾರ್ಥ ಮುಗಿಯಲು ಕೆಲವೇ ನಿಮಿಷಗಳಿರುವಾಗ ಸ್ಪೇನ್ ನ ಮತ್ತೊಬ್ಬ ಮುನ್ನಡೆ ಆಟಗಾರ ಮಾರ್ಕ್ ಕುಕುರೆಲ್ಲಾ ಅವರಿಗೆ ಗೋಲು ಗಳಿಸುವ ಸುವರ್ಣ ಅವಕಾಶ ಲಭಿಸುತ್ತದೆ. ಆದರೆ ಹೊಡೆತ ಗುರಿ ತಲುಪಿದ್ದರಿಂದ ಅರ್ಜೇಂಟೀನಾ ನಿಟ್ಟುಸಿರುಬಿಡುವಂತಾಗುತ್ತದೆ.
ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ವಿಂಗರ್ ನಿಕೊ ಗೊನ್ವಾಲಿಸ್ ಬದಲಿಗೆ ರಕ್ಷಣಾತ್ಮಕ ಮಿಡ್‌ಫೀಲ್ಡರ್ ಲಿಯಾಂಡ್ರೊ ಪ್ಯಾರೆಡೆಸ್ ಅವರನ್ನು ಕಣಕ್ಕಿಳಿಸುತ್ತದೆ. ಆದರೆ ಆಟದಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಿಸುವುದಿಲ್ಲ. ದ್ವಿತೀಯಾರ್ಧದ ಪ್ರಾರಂಭದಲ್ಲೇ ಅಲೆಕ್ಸ್ ಬೇನಾ ಅವರು ಗೋಲ್ ಪೋಸ್ಟ್ ಸಮೀಪ ತಲುಪಿ ಕರಾಮತ್ತು ಪ್ರದರ್ಶಿಸಲು ಮುಂದಾಗುತ್ತಾರೆ. ಆದರೆ ಪ್ರತಿಬಾರಿಯೂ ಅರ್ಜೆಂಟೀನಾ ಪಾಲಿನ ಆಪತ್ಬಾಂಧವನಾಗಿರುವ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಝ್ ತಕ್ಷಣವೇ ಎದುರಾಳಿಯ ಚಲನೆಯನ್ನು ಗ್ರಹಿಸಿ ಚೆಂಡು ಗೋಲ್ ಪೋಸ್ಟ್ ಒಳಕ್ಕೆ ನುಸುಳದಂತೆ ಜಾಗ್ರತೆ ವಹಿಸುತ್ತಾರೆ. ಅಲ್ಲಿಗೆ ಸ್ಪೇನ್ ನ ಮತ್ತೊಂದು ಪ್ರಯತ್ನವೂ ವಿಫಲವಾಗುತ್ತದೆ.
ಅರ್ಜೆಂಟೀನಾ ಹೆಸರಿಗೆ ಕೆಟ್ಟ ದಾಖಲೆ
ಅರ್ಜೆಂಟೀನಾ ತಂಡದ ಒಟ್ಟಾರೆ ಆಟ ವಿಶ್ವಚಾಂಪಿಯನ್ ಗೆ ತಕ್ಕುದಾಗಿರಲಿಲ್ಲ. ಇದೇ ವೇಳೆ ಸ್ಪೇನ್ ಮಾತ್ರ ನಿರಂತರ ದಾಳಿ ನಡೆಸುವ ಮೂಲಕ ಅರ್ಜೆಂಟೀನಾ ವಿರುದ್ಧ ಒತ್ತಡ ಹೇರುತ್ತಲೇ ಇತ್ತು. ಏತನ್ಮಧ್ಯೆ ಇಡೀ ವಿಶ್ವಕಪ್‌ನಲ್ಲಿ ಎರಡನೇ ಹೈಡ್ರೇಶನ್ ಬ್ರೇಕ್‌ವರೆಗೂ ಗೋಲಿನತ್ತ ಒಂದೇ ಒಂದು ಹೊಡೆತವನ್ನು ಸಹ ದಾಖಲಿಸದ ಅನಗತ್ಯ ದಾಖಲೆಯನ್ನು ಅರ್ಜೆಂಟೀನಾ ಮೊದಲ ಬಾರಿ ಬರೆಸಿಕೊಂಡಿತು. ಕಳೆದ ಆರು ವಿಶ್ವಕಪ್ ಫೈನಲ್‌ಗಳಲ್ಲಿ ನಿಗದಿತ ಸಮಯದಲ್ಲಿ ಡ್ರಾದಲ್ಲಿ ಕೊನೆಗೊಂಡ ಐದನೇ ನಿದರ್ಶನ ಇದಾಗಿದೆ.
ನಿಗದಿತ ಅವಧಿಯ ಅಂತಿಮ ಹಂತದಲ್ಲೂ ಸ್ಪೇನ್ ಗೆ ಫ್ರೀ ಕಿಕ್ ನ ಅವಕಾಶ ಸಿಕ್ಕಿತ್ತು. ಅದನ್ನೂ ಗೋಲ್ ಕೀಪರ್ ಮಾರ್ಟಿನೆಝ್ ಅವರು ವಿಫಲಗೊಳಿಸುವುದರೊಂದಿಗೆ ಪಂದ್ಯ ಯಾವುದೇ ಗೋಲುಗಳಿಕೆಯಿಲ್ಲದೆ ಸಮಬಲಗೊಳ್ಳುತ್ತದೆ. ಒಂದುವೇಳೆ ಮಾರ್ಟಿನೆಝ್ ಅವರು ಅಪ್ರತಿಮ ಆಟ ಅಲ್ಲದೇ ಹೋಗಿರುತ್ತಿದ್ದರೆ ಸ್ಪೇನ್ ಅದಾಗಲೇ ಕನಿಷ್ಠ ನಾಲ್ಕೈದು ಗೋಲುಗಳನ್ನು ಗಳಿಸಬೇಕಿತ್ತು.
ಪಂದ್ಯ ನಿಗದಿತ ಎರಡು ಅವಧಿಯಲ್ಲೂ ಮುಗಿಯದಾಗ ಹೆಚ್ಚುವರಿ ಸಮಯವನ್ನು ನಿಗದಿಗೊಳಿಸಲಾಯಿತು. ಈ ವೇಳೆ ಸ್ಪೇನ್ ನ ನಿಕೊ ವಿಲಿಯಮ್ಸ್ ಅವರು ಗೋಲಿ ಎಮಿಲಿಯಾನೊ ಮಾರ್ಟಿನೆಜ್ ಅವರನ್ನು ವಂಚಿಸಿ ಚೆಂಡನ್ನು ಗೋಲ್ ಪೋಸ್ಟ್ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೇನು ಸ್ಪೇನ್ ತಂಡ ಮೊದಲ ಗೋಲ್ ನ ಸಂಭ್ರಮದಲ್ಲಿರುವಾಗಲೇ ಅದನ್ನು ಫೌಲ್ ಎಂದು ರೆಫ್ರಿ ಘೋಷಿಸುತ್ತಾರೆ. ಹೀಗಾಗಿ ಸ್ಪೇನ್ ನ ಈ ಪ್ರಯತ್ನವೂ ವಿಫಲಗೊಳ್ಳುತ್ತದೆ.
ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ ಪಂದ್ಯದ 93ನೇ ನಿಮಿಷದಲ್ಲಿ ನಡೆದ ಘಟನೆಯು ಅರ್ಜೆಂಟೀನಾಗೆ ದೊಡ್ಡ ಹೊಡೆತವನ್ನು ನೀಡುತ್ತದೆ. ಅರ್ಜೆಂಟೀನಾದ ಮಧ್ಯಮ ಕ್ರಮಾಂಕದ ಆಟಗಾರ ಎನ್ ಝೋ ಫೆರ್ನಾಂಡೀಸ್ ಅವರಿಗೆ ರೆಫ್ರಿ ರೆಡ್ ಕಾರ್ಡ್ ತೋರಿದ್ದರಿಂದ ತಂಡವು 10 ಆಟಗಾರರೊಂದಿಗೆ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು. ಇದು ಸ್ಪೇನ್ ತಂಡಕ್ಕೆ ದೊಡ್ಡ ಲಾಭವನ್ನೇ ತಂದು ಕೊಟ್ಟಿತು ಎನ್ನಬಹುದು.
ಫೆರಾನ್ ಟೊರೆಸ್ ಗೋಲು !
ಕೊನೆಗೂ ಪಂದ್ಯದ 106 ನಿಮಿಷಗಳ ನಂತರ ಸ್ಪೇನ್ ಪಂದ್ಯದ ಮೊದಲ ಗೋಲು ಹೊಡೆಯುವ ಮೂಲಕ ಮುನ್ನಡೆ ಸಾಧಿಸಿತು! ಪೆಡ್ರೊ ಪೊರೊ ಅದನ್ನು ಬಾಕ್ಸ್‌ನೊಳಗೆ ತೇಲಿಸಿದರು, ನಿಕೊ ವಿಲಿಯಮ್ಸ್ ಅವರು ತಲೆಯಿಂದ ಹೊಡೆದ ಚೆಂಡು ಗೋಲ್ ಪೋಸ್ಟ್‌ಗೆ ಬಡಿದು ಹಿಂದುರುಗಿತು. ಫೆರಾನ್ ಅವರ ಎಡಗಾಲಿನಿಂದ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ಹೊಡೆದರು. ಈ ಮೂಲಕ ಸತತ 2ನೇ ಬಾರಿ ಟ್ರೋಫಿಗೆ ಮುತ್ತಿಕ್ಕುವ ಅರ್ಜೆಂಟೀನಾದ ಕನಸನ್ನು ನುಚ್ಚುನೂರುಗೊಳಿಸಿದರು.


