ದ್ವೇಷ ಭಾಷಣ ಮಸೂದೆ – ರಾಜ್ಯಪಾಲರ ಸಹಿ ನಿರಾಕರಣೆ ಹಿಂದಿನ ಕಾರಣ ಬಹಿರಂಗ !

ಬೆಂಗಳೂರು, ಫೆ. 02 : ರಾಜ್ಯ ರಾಜಕಾರಣದಲ್ಲಿ ರಾಜ್ಯಪಾಲರ ಭಾಷಣ ನಿರಾಕರಣೆ ವಿವಾದವು ಒಂದು ಹಂತಕ್ಕೆ ಮುಗಿದಿರುವಾಗ ಇದೀಗ, ಸಹಿ ನಿರಾಕರಣೆ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆ ಇದೀಗ ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಿರಾಕರಿಸಿದ್ದು, ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡುವಂತೆ 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಇದರೊಂದಿಗೆ ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ.

Advertisement

ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದ ಈ ಮಸೂದೆಗೆ ರಾಜ್ಯಪಾಲರು ಸಹಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಸಂವಿಧಾನದ ವಿಧಿ ಅನ್ವಯ ಮಸೂದೆಯನ್ನು ರಾಷ್ಟ್ರಪತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹವಾಗಿದೆ. ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಅಸ್ಪಷ್ಟತೆ ಧರ್ಮ, ಜಾತಿ, ಜನಾಂಗ ಅಥವಾ ವ್ಯಕ್ತಿಗಳ ವಿರುದ್ಧ ಪೂರ್ವಾಗ್ರಹಪೂರಿತ ಕ್ರಮಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಹಾಗೂ ಸಮಗ್ರ ಚರ್ಚೆ ಇಲ್ಲದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಟೀಕಿಸಿದ್ದು, ಇದರಿಂದ ಸಂವಿಧಾನಾತ್ಮಕವಾಗಿ ರಕ್ಷಿತವಾಗಿರುವ ಪ್ರಜಾಪ್ರಭುತ್ವದ ಚರ್ಚೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಮಸೂದೆಯಲ್ಲಿ ಹಲವು ಕಾನೂನು ತೊಡಕುಗಳು ಇರುವುದಾಗಿ ಉಲ್ಲೇಖಿಸಿದ ರಾಜ್ಯಪಾಲರು, ಇದು ಮಿತಿ ಮೀರಿದ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆ. ವಿಶೇಷವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಭೀತಿ ಈ ಮಸೂದೆಯಲ್ಲಿದೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.

ಇದಲ್ಲದೆ, ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಆತಂಕ, ಹಾಗೂ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಈಗಾಗಲೇ ಕೇಂದ್ರ ಮಟ್ಟದಲ್ಲಿ ಹಲವು ಕಾನೂನುಗಳು ಜಾರಿಯಲ್ಲಿರುವುದು ಎಂಬ ಅಂಶಗಳನ್ನೂ ರಾಜ್ಯಪಾಲರು ತಮ್ಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ. ಬೌದ್ಧಿಕ ಚಿಂತನೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

ರಾಜ್ಯಪಾಲರ ಸಹಿ ನಿರಾಕರಣೆ ಮತ್ತು ಮಸೂದೆ ರಾಷ್ಟ್ರಪತಿಗಳ ಬಳಿ ತೆರಳಿರುವುದರಿಂದ, ದ್ವೇಷ ಭಾಷಣ ಮಸೂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಪತಿಗಳ ತೀರ್ಮಾನ ಏನಾಗಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.