ಮುಂಬೈ, ಅ. 24 : ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪ್ರಚೋದನೆ ನೀಡುವಂತಹ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದ 33 ವರ್ಷದ ರ‍್ಯಾಪಿಡೋ ಬೈಕ್ ಚಾಲಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಮುಂಬೈನ ಮಾಹಿಮ್ ನಿವಾಸಿಯಾದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಎಟಿಎಸ್‌ನ ಕಾಲಾಚೌಕಿ ಘಟಕವು ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಆತನನ್ನು ವಶಕ್ಕೆ ಪಡೆದಿದೆ.
ಮುಖವಾಡದ ಜೀವನ ಮತ್ತು ಪಾಕಿಸ್ತಾನದ ನಂಟು ಅನುಮಾನ ಬಾರದಂತೆ ಡಬಲ್ ರೋಲ್: ಸ್ಥಳೀಯರ ಪ್ರಕಾರ, ಅಖ್ತರ್ ಕಳೆದ ಮೂರೂವರೆ ವರ್ಷಗಳಿಂದ ಮಾಹಿಮ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ. ಹಗಲಿನಲ್ಲಿ ಅತ್ತರ್ (ಸುಗಂಧ ದ್ರವ್ಯ) ಮಾರಾಟಗಾರನಾಗಿ ಹಾಗೂ ರ‍್ಯಾಪಿಡೋರೈಡರ್ ಆಗಿ ಕೆಲಸ ಮಾಡುತ್ತಿದ್ದ ಆತ, ಒಳಗೊಳಗೇ ಯುವಕರನ್ನು ಉಗ್ರವಾದಕ್ಕೆ ಪ್ರಚೋದಿಸುವ ಕೃತ್ಯದಲ್ಲಿ ತೊಡಗಿದ್ದ.
ಪಾಕ್ ಹ್ಯಾಂಡ್ಲರ್ಸ್ ಸಂಪರ್ಕ: ಪಾಕಿಸ್ತಾನಿ ಗುಪ್ತಚರ ಮತ್ತು ಉಗ್ರರೊಂದಿಗೆ ಈತ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಟೆಲಿಗ್ರಾಂನಲ್ಲಿ ಪಾಕಿಸ್ತಾನ ಬೆಂಬಲಿತ ‘ಐಬಿಎನ್ ಇ ಖಾಸಿಮ್’ ಚಾನೆಲ್‌ನ ಸಕ್ರಿಯ ಸದಸ್ಯನಾಗಿದ್ದ. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಬಾಬರಿ ಮಸೀದಿ ಕುರಿತಾದ ಪ್ರಚೋದನಕಾರಿ ಆಡಿಯೋ ತುಣುಕುಗಳನ್ನು ‘ಇಂಡಿಯನ್ ಮುಸ್ಲಿಂ’ ಎಂಬ ಟೆಲಿಗ್ರಾಂ ಗ್ರೂಪ್‌ನಲ್ಲಿ ಹಂಚಿಕೊಂಡು ಧಾರ್ಮಿಕ ದ್ವೇಷ ಬಿತ್ತುತ್ತಿದ್ದ.
ಪ್ರಧಾನಿ ಮೋದಿ ವಿರುದ್ಧದ ಆಕ್ಷೇಪಾರ್ಹ ಪೋಸ್ಟ್ ತನಿಖಾಧಿಕಾರಿಗಳು ಆರೋಪಿಯ ರೆಡ್ಮಿ ನೋಟ್ 14 ಪ್ರೊ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆತ ಮಾಡಿರುವ 39ಕ್ಕೂ ಹೆಚ್ಚು ಆಕ್ಷೇಪಾರ್ಹ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ “ಅಬ್ ಜಿಹಾದ್ ಕಾ ಜಮಾನಾ ಆಗಯಾ ಹೈ” ಎಂದು ಬರೆದು ಶಸ್ತ್ರಾಸ್ತ್ರಗಳನ್ನು ಹಿಡಿಯುವಂತೆ ಪ್ರಚೋದಿಸಿದ್ದ. ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಯ ಭದ್ರತಾ ಲೋಪದ ಕುರಿತಾದ ಸುದ್ದಿಯೊಂದರ ಕೆಳಗೆ ಕಾಮೆಂಟ್ ಮಾಡಿದ್ದ ಆತ, “ಇಂದಿರಾ ಗಾಂಧಿಗೆ ಮಾಡಿದ್ದನ್ನೇ ಪ್ರಧಾನಿ ಮೋದಿಗೂ ಮಾಡಬೇಕಿತ್ತು” ಎಂದು ಮಾಜಿ ಪ್ರಧಾನಿಯ ಹತ್ಯೆಯ ರೀತಿಯಲ್ಲೇ ಪ್ರಧಾನಿ ಮೋದಿಯವರನ್ನೂ ಹತ್ಯೆ ಮಾಡಲು ಕರೆ ನೀಡಿದ್ದ.
ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪದ ಮೇಲೆ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲೂ ಒಬ್ಬ ಆರೋಪಿ ರ‍್ಯಾಪಿಡೋ ರೈಡರ್ ಸೋಗಿನಲ್ಲಿ ದುಬಾರಿ ಪ್ರದೇಶಗಳಲ್ಲಿ ಗೂಢಚಾರಿಕೆ (ರೆಕ್ಕಿ) ನಡೆಸಿದ್ದ ಅಂಶ ಬೆಳಕಿಗೆ ಬಂದಿತ್ತು.
ರ‍್ಯಾಪಿಡೋ ಕಂಪನಿ ಹೇಳಿಕೆ : ಈ ಬೆಳವಣಿಗೆಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರ‍್ಯಾಪಿಡೋ, “ಅಕ್ಟೋಬರ್ 14 ರಿಂದಲೇ ಆ ವ್ಯಕ್ತಿ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಪ್ಟನ್ ಆಗಿ ಸಕ್ರಿಯವಾಗಿರಲಿಲ್ಲ. ಗಿಗ್ ಎಕಾನಮಿಯಲ್ಲಿ ಜನರು ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಇರುತ್ತಾರೆ. ಘಟನೆಯ ದಿನ ಆತ ಕೇವಲ ಗ್ರಾಹಕನಾಗಿ ಬೈಕ್ ಬುಕ್ ಮಾಡಿದ್ದ” ಎಂದು ತಿಳಿಸಿದೆ.
ಗುಜರಾತ್ ಎಟಿಎಸ್ ಲಿಂಕ್ : ಇದಕ್ಕೂ ಮುನ್ನ ಜುಲೈನಲ್ಲಿ ಗುಜರಾತ್ ಎಟಿಎಸ್ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಮಾಡ್ಯೂಲ್ ಒಂದನ್ನು ಬೇಧಿಸಿ ಐವರನ್ನು ಬಂಧಿಸಿತ್ತು. ಪ್ರಸ್ತುತ ಮುಂಬೈನಲ್ಲಿ ಸಿಕ್ಕಿಬಿದ್ದಿರುವ ಅಖ್ತರ್ ಆ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

