ಚಾರ್ಮಾಡಿ, ಜೂ. 16 : ಉಜಿರೆಯಿಂದ ಚಾರ್ಮಾಡಿ ಕಡೆಗೆ ತೆರಳುತ್ತಿದ್ದ ಬಿಳಿ ಬಣ್ಣದ ಟೊಯೋಟಾ ಇನೋವಾ ಕ್ರಿಸ್ಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ಜೂನ್ 16 ರಂದು ರಸ್ತೆಯಿಂದ ಕೆಳಗೆ ಉರುಳಿ ಪಲ್ಟಿಯಾಗಿದೆ.
ಘಾಟ್ ರಸ್ತೆಯ ಕಡಿದಾದ ತಿರುವಿನಲ್ಲಿ ಕಾರು ಸಮತೋಲನ ಕಳೆದುಕೊಂಡು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಬಿದ್ದು ಪಲ್ಟಿಯಾಗಿದೆ. ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ. ಎಲ್ಲಾ ಬಾಗಿಲುಗಳು ತೆರೆದಿದ್ದು, ಕಾರು ಸಂಪೂರ್ಣವಾಗಿ ತಲೆಕೆಳಗಾಗಿದೆ.

‘POLICE’ ಸ್ಟಿಕ್ಕರ್
ಅಪಘಾತಕ್ಕೊಳಗಾದ KA01 G 6463 ನಂಬರಿನ ಕಾರಿನ ಹಿಂಭಾಗದ ಗಾಜಿನ ಮೇಲೆ ‘POLICE’ ಎಂದು ಬರೆದಿರುವ ಸ್ಟಿಕ್ಕರ್ ಸ್ಪಷ್ಟವಾಗಿ ಕಂಡುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರು ಸಂಪೂರ್ಣ ಜಖಂಗೊಂಡಿದ್ದರು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.


