ಜಮ್ಮು, ಜೂ. 17 : ಜಮ್ಮು ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಮುಂಜಾನೆ ಜಮ್ಮು ಅಭಿವೃದ್ಧಿ ಪ್ರಾಧಿಕಾರ (JDA) ಭರ್ಜರಿ ತೆರವು ಕಾರ್ಯಾಚರಣೆ ನಡೆಸಿದ್ದು, ಸುಮಾರು 30ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಈ ಮೂಲಕ ಅತಿಕ್ರಮಣಕ್ಕೊಳಗಾಗಿದ್ದ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಭೂಮಿಯನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ವಾಣಿಜ್ಯ ಮಳಿಗೆಗಳ ತೆರವು: ರೈಲ್ವೆ ನಿಲ್ದಾಣದ ಸಮೀಪದ ನಿಕಟವರ್ತಿ ಪ್ರದೇಶದಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಧಾಬಾಗಳು ಹಾಗೂ ಅಕ್ರಮ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿ ಈ ಮುಂಜಾನೆ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲಾಡಳಿತದ ಸಹಯೋಗದೊಂದಿಗೆ ಸುಮಾರು ಅರ್ಧ ಎಕರೆ ಪ್ರಮುಖ ಜಾಗವನ್ನು ಜೆಡಿಎ ವಶಕ್ಕೆ ಪಡೆದಿದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಬುಲ್ಲೋಜರ್ ಘರ್ಜನೆ !
ಈ ಜಾಗವು ಕಳೆದ ಹಲವು ವರ್ಷಗಳಿಂದ ಕಾನೂನುಬಾಹಿರವಾಗಿ ಇಬ್ಬರು ವ್ಯಕ್ತಿಗಳ ಅಧೀನದಲ್ಲಿತ್ತು. ಅಲ್ಲಿ ಹೋಟೆಲ್‌ಗಳು (ಧಾಬಾ) ಹಾಗೂ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. ಇದರ ಸಕ್ರಮಕ್ಕಾಗಿ ಅತಿಕ್ರಮಣದಾರರು ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸಕ್ಷಮ ಪ್ರಾಧಿಕಾರವು, ಈ ಆಕ್ರಮಣವು ಕಾನೂನುಬಾಹಿರ ಮತ್ತು ಅಸಿಂಧು ಎಂದು ತೀರ್ಪು ನೀಡಿತ್ತು. ಅತಿಕ್ರಮಣ ತೆರವುಗೊಳಿಸಿ ಜಾಗವನ್ನು ಜೆಡಿಎಗೆ ಹಸ್ತಾಂತರಿಸುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಜೆಡಿಎ ಈ ಕಠಿಣ ಕ್ರಮ ಕೈಗೊಂಡಿದೆ.
ಸಂಚಾರ ದಟ್ಟಣೆಗೆ ಮುಕ್ತಿ: ಈ ಅಕ್ರಮ ಒತ್ತುವರಿಯಿಂದಾಗಿ ರೈಲ್ವೆ ನಿಲ್ದಾಣದ ಸುತ್ತಮುತ್ತ ರಸ್ತೆ ಬದಿಯ ಪಾರ್ಕಿಂಗ್ ಹೆಚ್ಚಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಪಾದಚಾರಿಗಳು ಹಾಗೂ ಪ್ರಯಾಣಿಕರಿಗೆ ಇದರಿಂದ ಭಾರಿ ತೊಂದರೆಯಾಗುತ್ತಿತ್ತು.
ಈ ಅಕ್ರಮ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳಿದ್ದವು ಹಾಗೂ ಇಲ್ಲಿನ ಧಾಬಾಗಳಲ್ಲಿ ಅತ್ಯಂತ ಅಶುಚಿಯಾದ ವಾತಾವರಣದಲ್ಲಿ ಆಹಾರ ತಯಾರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟುನಿಟ್ಟಿನ ಎಚ್ಚರಿಕೆ: “ಸಾರ್ವಜನಿಕ ಭೂಮಿಯು ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಅಕ್ರಮ ಒತ್ತುವರಿಯಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ. ಯೋಜಿತ ನಗರಾಭಿವೃದ್ಧಿಗೆ ಅಡ್ಡಿಪಡಿಸುವ ಇಂತಹ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ” ಎಂದು ಜೆಡಿಎ ಉಪಾಧ್ಯಕ್ಷ ರೂಪೇಶ್ ಕುಮಾರ್ ಎಚ್ಚರಿಸಿದ್ದಾರೆ.


