ಬೆಂಗಳೂರು, ಜೂ. 19 : ಇಂದಿನ ಯುಗದಲ್ಲಿ ಯಾರನ್ನು ನಂಬುವುದು ? ಯಾರನ್ನು ಬಿಡುವುದು ? ಎಂಬುದೇ ಅರ್ಥ ಆಗಲ್ಲ. ಜೊತೆಯಲ್ಲೇ ಇದ್ದು, ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ. ಹಾಗಂತ ಎಲ್ಲರೂ ಹಾಗಲ್ಲ ಆದರೆ ಯಾರನ್ನು ನಂಬಬೇಕು ಎನ್ನುವ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವೇ ಸಿಗುವುದಿಲ್ಲ. ನಮ್ಮೊಂದಿಗಿರುವವರು ಶತ್ರುಗಳಾ ಮಿತ್ರರಾ ಎಂಬುದು ನಮಗೆ ತಿಳಿದಿರುವುದಿಲ್ಲ. ಒಳ್ಳೆಯವರಂತೆ ನಟಿಸುವ ವಿಷಕಾರಿ ಜನರೊಂದಿಗೆ ನಾವು ಇರಬಹುದು. ಇದಕ್ಕೆ ಚಾಮರಾಜಪೇಟೆಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ.
ಸ್ನೇಹಿತೆಯೊಬ್ಬಳು ತನ್ನ ಬಾಯ್‌ಫೆಂಡ್ ಜೊತೆ ಸಲುಗೆ ಬೆಳೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೋದ ಮಹಿಳೆ ಈಗ ಜೈಲು ಸೇರಿದ್ದಾಳೆ. ತನ್ನ ಸ್ನೇಹಿತೆಯ ಖಾಸಗಿ ಫೋಟೋಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ಆದರೆ, ಪೊಲೀಸರ ಬಂಧನದ ಬಳಿಕ ಆ ಮಹಿಳೆಯ ಮೊಬೈಲ್ ನಲ್ಲಿ ಆಘಾತಕಾರಿ ಅಂಶಗಳು ಬಯಲಾಗಿದೆ.
ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶ್ವೇತಾ ಎಂಬ ಮಹಿಳೆ ಬಂಧಿತ ಆರೋಪಿ.
ಏನಿದು ಸ್ನೇಹಿತೆಯರ ಮಧ್ಯೆ ಉಂಟಾದ ಬಿರುಕಿನ ಕಥೆ ?
ಶ್ವೇತಾಳ ಬಾಯ್‌ಫ್ರೆಂಡ್ ಜೊತೆ ಆಕೆಯ ಸ್ನೇಹಿತೆ ಸಲುಗೆಯಿಂದ ಇದ್ದಳು. ಇದು ಇಬ್ಬರ ವೈಯಕ್ತಿಕ ಜಗಳಕ್ಕೆ ಕಾರಣವಾಗಿದೆ. ತನ್ನ ಬಾಯ್‌ಫ್ರೆಂಡ್ ಸ್ನೇಹಿತೆಯ ಜೊತೆಗೆ ಇರುವ ಫೋಟೋ ಕಂಡ ಶ್ವೇತ, ಆಕೆಯೊಂದಿಗೆ ಜಗಳವಾಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ, ಸ್ನೇಹಿತೆ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಯ್‌ಫ್ರೆಂಡ್ ಫೋನ್‌ನಲ್ಲಿದ್ದ ಫೋಟೋಗಳನ್ನ ಕಳವು ಮಾಡಿದ್ದಾಳೆ. ಕದ್ದ ಖಾಸಗಿ ಫೋಟೋಳನ್ನ ಸ್ನೇಹಿತೆಯ ಗಂಡನಿಗೆ ಕಳಿಸಿ, ಸಂಸಾರದಲ್ಲಿ ಹುಳಿ ಹಿಂಡಿದ್ದಾಳೆ. ಇದರಿಂದ ಶ್ವೇತಾ ಸ್ನೇಹಿತೆಯ ಸಂಸಾರದಲ್ಲಿ ಬಿರುಕುಬಿಟ್ಟಿದೆ.
ಇಷ್ಟಕ್ಕೆ ಸುಮ್ಮನಾಗದ ಶ್ವೇತಾ, ಇನ್ನಷ್ಟು ಫೋಟೋಳಿವೆ, ವೈರಲ್ ಮಾಡೋದಾಗಿಯೂ ಬೆದರಿಕೆ ಹಾಕಿದ್ದಾಳೆ. ಕೂಡಲೇ ಮಹಿಳೆಯ ಪತಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಐಟಿ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಶ್ವೇತಾಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಶ್ವೇತಾಳ ಮೊಬೈಲ್‌ನಲ್ಲಿ ಹಲವು ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲ ರಾಜಕಾರಣಿಗಳು ಫೋಟೋಗಳಲ್ಲಿದ್ದಾರಂತೆ. ಮುಂದಿನ ವಿಚಾರಣೆ ಕೈಗೊಂಡಿರುವ ಚಾಮರಾಜಪೇಟೆ ಪೊಲೀಸ್ರು ಶ್ವೇತಾಳ ಹಿನ್ನೆಲೆ ಕೆದಕುತ್ತಿದ್ದಾರೆ.


