ಕೊಕ್ಕಡ : ಕಾಡಾನೆಗಳ ದಾಳಿ – ವಾಹನಗಳು ಜಖಂ, ಕೃಷಿಗೆ ಅಪಾರ ಹಾನಿ !

ಕೊಕ್ಕಡ, ಮಾ. 31 : ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎರಡು ವಾಹನಗಳ ಮೇಲೆ ಆನೆ ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಕೃಷಿ ತೋಟಗಳು, ಮನೆಗಳ ಸುತ್ತಮುತ್ತ ಸಂಚರಿಸುತ್ತಾ ನಿರಂತರ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ವಾಹನಗಳ ಮೇಲೂ ದಾಳಿ ನಡೆಸುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಮಾ.28ರಂದು ರಾತ್ರಿ ತೆಂಕುಬೈಲು ಪ್ರದೇಶದಲ್ಲಿ ಕಾಡಾನೆ ಸಂಚರಿಸುವ ವೇಳೆ ಯಶವಂತ ಅವರ ತೋಟದ ಕೆಲಸದ ಕಾರ್ಮಿಕನಿಗೆ ಸೇರಿದ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಅದೇ ರೀತಿ ಮಾ.29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲು ಪ್ರದೇಶದಲ್ಲಿ ಸೇಸಪ್ಪ ಗೌಡ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೂ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿದೆ. ಇದಲ್ಲದೆ, ಹಲವು ಕಡೆಗಳಲ್ಲಿ ಬಾಳೆ, ತೆಂಗು, ಅಡಿಕೆ ಹಾಗೂ ಭತ್ತದ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಪಾರ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಎರಡನೇ ಬಾರಿ ಭೇಟಿ ನೀಡಿ ಸಂತ್ರಸ್ತರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸರಕಾರದಿಂದ ದೊರೆಯುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದ್ದು, ಸುಬ್ಬಯ್ಯ ನಾಯಕ್ ಅವರು ರಾತ್ರಿ ಇಡೀ ತಂಡದೊಂದಿಗೆ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.

ಕಾಡಾನೆಗಳ ಉಪಟಳದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಿರಂತರ ಪಹರೆ, ಶಾಶ್ವತ ಪರಿಹಾರ ಕ್ರಮಗಳು ಹಾಗೂ ಕಾಡಾನೆಗಳ ಚಲನವಲನ ನಿಯಂತ್ರಣಕ್ಕೆ ತಕ್ಷಣದ ಯೋಜನೆ ಜಾರಿಗೊಳಿಸುವಂತೆ ಜನರು ಒತ್ತಾಯಿಸಿದ್ದಾರೆ. ಇದರೊಂದಿಗೆ, ಅರಣ್ಯ ಇಲಾಖೆ ಕೂಡ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದ್ದು, ವಿಶೇಷವಾಗಿ ರಾತ್ರಿ ವೇಳೆ ಮತ್ತು ಕಾಡು ಪ್ರದೇಶಗಳ ಸಮೀಪ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.