ಚೆನ್ನೈ, ಜೂ. 15 : ತಮಿಳುನಾಡಿನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, ತಿರುವಲ್ಲೂರು ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯದಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಪ್ರಕರಣದ ಸಂಬಂಧ ಬಿಹಾರದ ವಲಸೆ ಕಾರ್ಮಿಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದವರೇ ಆಗಿರುವ ಮಗುವಿನ ಕುಟುಂಬವು ಗುಮ್ಮಿಡಿಪೂಂಡಿಯ ಸಿಪ್ಯಾಟ್ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿತ್ತು.
ರವಿವಾರ (ಜೂ.15) ಪೊದೆ ಪ್ರದೇಶದಲ್ಲಿ ಗಂಭೀರ ಗಾಯಗಳೊಂದಿಗೆ ಬಾಲಕಿಯನ್ನು ಬಿಟ್ಟು ಹೋಗಲಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
ಬಾಲಕಿಗೆ ಆರೋಪಿಯ ಪರಿಚಯವಿದ್ದು, ಬಿಸ್ಕತ್ತು ಕೊಡಿಸುವುದಾಗಿ ಆಮಿಷವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. “ಆ ಮಗುವಿಗೆ ಆತನ ಪರಿಚಯವಿತ್ತು. ಆಕೆಗೆ ಬಿಸ್ಕತ್ತು ನೀಡಿ, ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಕೋಪಗೊಂಡಿದ್ದ ಸ್ಥಳೀಯರು ಅನುಮಾನದಿಂದ ಇತರ ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಭಯಾನಕ ಕೃತ್ಯದಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಪೊಲೀಸರು ತಳ್ಳಿಹಾಕಿದರು. “ಇದು ಸಾಮೂಹಿಕ ಅತ್ಯಾಚಾರ ಪ್ರಕರಣವಲ್ಲ. ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದಾನೆ” ಎಂದು ಅಧಿಕಾರಿ ಹೇಳಿದರು.
ಪ್ರದೇಶದ ನಿವಾಸಿ ಇಂದುಮತಿ ಮಾತನಾಡಿ, “ಮಗು ಮನೆಯಲ್ಲಿತ್ತು. ಆ ವ್ಯಕ್ತಿ ಅವಳಿಗೆ ಬಿಸ್ಕತ್ತು ನೀಡಿ ಕರೆದುಕೊಂಡು ಹೋದ. ನಂತರ ಆಕೆಯನ್ನು ಪೊದೆಗಳಲ್ಲಿ ಬಿಟ್ಟು ಹೋಗಿದ್ದು, ಅಲ್ಲಿಗೆ ಹೋಗಿದ್ದ ಮಹಿಳೆಯೊಬ್ಬರು ನೋಡಿದರು. ಮಗುವನ್ನು ಸ್ವಚ್ಛಗೊಳಿಸಿದಾಗ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಯಿತು” ಎಂದರು.


