ಬೆಂಗಳೂರು, ಮಾ. 12 : ಸುಬ್ರಹ್ಮಣ್ಯ – ಕುಮಾರ ಪರ್ವತದ ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಒಪ್ಪಿಗೆ ಸೂಚಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಭಾಗೀರಥಿ ಮುರುಳ್ಯಾ, ಸುಬ್ರಹ್ಮಣ್ಯದಿಂದ, ಕುಮಾರ ಪರ್ವತಕ್ಕೆ ಚಾರಣ ಹೋಗಲು ವ್ಯವಸ್ಥೆ ಬದಲಾಗಿದೆ. ಬೆಳಗ್ಗೆ 5 ಗಂಟೆ ಬದಲಾಗಿ, ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ಹೋಗಲು ಬಿಡಲಾಗ್ತಿದೆ. ಇದರಿಂದ ಶಿಖರಕ್ಕೆ ತಲುಪಲು ಸಮಯ ವ್ಯತ್ಯಾಸ ಆಗುತ್ತಿದೆ. ಶೇಷಗಿರಿ ಪರ್ವತಕ್ಕೆ ಹೋಗಲು ಬಿಡುತ್ತಿಲ್ಲ. ಹಾಗಾಗಿ, ಮೊದಲಿನಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರಿಸುತ್ತಾ, ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣ ಮಾಡಿ ವಾಪಸಾಗಲು ಎರಡು ದಿನ ಬೇಕು. ಹೋದವರು ಅಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿ ಹೋಗುವ ಪ್ರವಾಸಿಗರ ರಕ್ಷಣೆಗೆ ಸಮಸ್ಯೆ ಇತ್ತು. ಕಾಡು ಪ್ರಾಣಿಗಳಿರುವುದರಿಂದ, ಸಮಯ ಬದಲಾವಣೆ ಮಾಡಲಾಗಿದೆ. 19 ಕಿ. ಮೀ. ಚಾರಣಕ್ಕೆ 10 ಗಂಟೆ ಬೇಕಿದೆ. ಒಟ್ಟು 24 ಕಿ.ಮೀ. ಇದ್ದು, ಅದನ್ನು ಕಡಿಮೆ ಮಾಡಿದ್ದೇವೆ. ಬೆಳಗ್ಗೆ ಹೊರಟವರು, ಸಂಜೆ ಆರು ಗಂಟೆಗೆ ವಾಪಸು ಬರಬೇಕು ಅಂತ ಮಾಡಿದ್ದೇವೆ ಎಂದರು.
2-3 ಸಾವಿರ ಪ್ರಯಾಣಿಕರು ಒಂದೆಡೆ ಸೇರಿದ್ರೆ ಸಮಸ್ಯೆ ಆಗಲಿದೆ. ಬೇಸಿಗೆಯಲ್ಲಿ ಕಾಳ್ಗಿಚ್ಚು ಆಗುವ ಕಾರಣ ಬಿಟ್ಟಿಲ್ಲ. ಸಮಸ್ಯೆ ಆಗಬಾರದು ಅಂತ ಬೇಕು ಅಂತಲೇ ತಡೆದಿದ್ದೇವೆ. ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸುತ್ತೇವೆ. ಆದರೆ ಸಂಜೆ 6 ಗಂಟೆಯೊಳಗೆ ವಾಪಸ್ ಆಗಬೇಕು ಎಂದು ಇದೇ ವೇಳೆ ಪ್ರಕಟಿಸಿದರು.
ಈ ವೇಳೆ ಭಾಗೀರಥಿ ಮುರುಳ್ಯಾ, 10 ಗಂಟೆ ನಂತರ ಹೋಗುವವರಿಗೂ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದರು. ಆಗ ಆರ್. ಅಶೋಕ್ ಅವರು ಮಧ್ಯಪ್ರವೇಶಿಸಿ, ಸಫಾರಿಗೆ ಹೋಗೋದು ಬೇರೆ ದೇಶದಲ್ಲಿ ಲಾಭದಾಯಕವಿದೆ. ನೀವು ರದ್ದು ಮಾಡಿ, ಬೇಡ ಅನ್ನಲ್ಲ. ಆದರೆ, ಸ್ಥಗಿತ ಮಾಡೋ ಮೊದಲು ಸರ್ವೆ ಮಾಡಿಸಿ. ಅಲ್ಲಿ ಕೆಲಸ ಮಾಡೋರ ಆದಾಯ ಕೂಡ ನಿಂತು ಹೋಗಲಿದೆ. ಸರ್ವೆ ಮಾಡಿ ಏನು ಸಮಸ್ಯೆ ಅನ್ನೋದನ್ನು ಮೊದಲೇ ಮಾಹಿತಿ ಪಡೆದಿದ್ದರೆ, ಸ್ಥಗಿತಗೊಳಿಸೋದನ್ನು ನಿಲ್ಲಿಸಬಹುದಿತ್ತು. ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷದಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೇ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಫಾರಿ ಬೇಕು ಅಂತ ನಿಲ್ಲಿಸಿಲ್ಲ: ಈ ವೇಳೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಸಫಾರಿ ಬೇಕು ಅಂತ ನಿಲ್ಲಿಸಿಲ್ಲ. ಸಫಾರಿ ಸಂದರ್ಭದಲ್ಲಿ ಹುಲಿ ದಾಳಿಯಿಂದ ಮೂವರು ಗಾಯಾಳುಗಳಾದ್ರು. ಸಫಾರಿಗೆ ಏಕಾಏಕಿ ಜನರು ಹೆಚ್ಚಾದ್ರು. ಮತ್ತೆ ಹುಲಿ ದಾಳಿ ಆಗಿದ್ದರಿಂದ, ಸಫಾರಿ ಬಂದ್ ಮಾಡಲಾಯಿತು. ಕಳೆದ ನವೆಂಬರ್ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತು ಬದ್ಧವಾಗಿ ಪುನಾರಂಭ ಮಾಡಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು. ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು. ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.
ನವೆಂಬರ್ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ, ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ, ಹೆಚ್ಚಿನ ವಾಹನಗಳ ಸಂಚಾರ ಇದೆ, ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ, ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು.
100 ಕಿಮೀ ಗಡಿ ಹೆಚ್ಚಿನ ಸಂಘರ್ಷ ಪ್ರದೇಶ: ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿಮೀ ಗಡಿ ಹೆಚ್ಚಿನ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. ಕಳೆದ 3 ವರ್ಷದ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ 175 ಹುಲಿ ಇವೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

