ಬೆಂಗಳೂರು, ಮಾ. 02 : ರಾಜ್ಯದಲ್ಲಿ ಪದೇ ಪದೇ ಬೆಲೆಯೇರಿಕೆ ಕಾಣುತ್ತಿರುವುದು ಮದ್ಯ… ಇದೀಗ ಮತ್ತೆ ಮದ್ಯದ ಬೆಲೆಯನ್ನು ಏರಿಸಲು ಚಿಂತನೆ ನಡೆಸುತ್ತಿದೆ ರಾಜ್ಯ ಸರ್ಕಾರ. ಅದರಲ್ಲೂ ಇದೀಗ ಸರ್ಕಾರ ಕಣ್ಣಿಟ್ಟಿರುವುದು ಅತೀ ಕಡಿಮೆ ಬೆಲೆಗೆ ಸಿಗುವ ಮದ್ಯದ ಮೇಲೆಯೇ..! ಕಡಿಮೆ ಬೆಲೆಯ ಮದ್ಯದ ದರವನ್ನೇ ಏರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ತೀವ್ರ ಕಸರತ್ತು ನಡೆಸಿರುವ ರಾಜ್ಯ ಸರಕಾರ ಅಬಕಾರಿ ಇಲಾಖೆ ಆದಾಯ ಸಂಗ್ರಹಣೆ ಗುರಿಯನ್ನು ಶೇ. 10ರಷ್ಟು ಹೆಚ್ಚಿಸಲು ಮುಂದಾಗಿದ್ದು, ಬಜೆಟ್ ಬಳಿಕ ಮದ್ಯಪ್ರಿಯರಿಗೆ ಬೆಲೆ ಏರಿಕೆಯ ದೊಡ್ಡ ಶಾಕ್ ಕಾದಿದೆ.
ಉಚಿತ ಗ್ಯಾರಂಟಿಗಳಿಗೆ ವಾರ್ಷಿಕ ಸುಮಾರು 59 ಸಾವಿರ ಕೋಟಿ ರೂ. ಖರ್ಚಾಗುತ್ತಿದ್ದು, ಇದು ಸರಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರ, ಅಬಕಾರಿ, ಕಂದಾಯ ಹಾಗೂ ಸಾರಿಗೆ ಇಲಾಖೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಅಬಕಾರಿ ಇಲಾಖೆಯು ಪ್ರಮುಖ ಆದಾಯ ಮೂಲವಾಗಿದ್ದು, ಪ್ರತಿ ವರ್ಷ ಮದ್ಯದ ದರ ಪರಿಷ್ಕರಣೆ ಮೂಲಕ ಸರಕಾರ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ.
ವರ್ಷದಿಂದ ವರ್ಷಕ್ಕೆ ಅಬಕಾರಿ ಇಲಾಖೆಯ ಆದಾಯ ಸಂಗ್ರಹಣೆ ಗುರಿ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ತಕ್ಕಂತೆ ಮದ್ಯದ ಬೆಲೆಯೂ ಏರಿಕೆಯಾಗುತ್ತಿದೆ. ಬಡ, ಮಧ್ಯಮ ವರ್ಗದ ಜನರು ಹೆಚ್ಚಾಗಿ ಸೇವಿಸುವ ಅಗ್ಗದ ಮದ್ಯಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ದರ ಹೆಚ್ಚಳದಿಂದಾಗಿ ಮದ್ಯದ ವಹಿವಾಟು ಕುಸಿದು, ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
2025-26ನೇ ಸಾಲಿನ ಬಜೆಟ್‌ನಲ್ಲಿಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಯ ಗುರಿ ನೀಡಲಾಗಿತ್ತು. ಬಳಿಕ ಇದನ್ನು ಪರಿಷ್ಕರಿಸಿ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನೀಡಲಾಯಿತು. ಇಲಾಖೆ ಈವರೆಗೆ ಶೇ. 77.61ರಷ್ಟು (33,371 ಕೋಟಿ ರೂ.) ಆದಾಯ ಸಂಗ್ರಹಣೆ ಗುರಿ ಸಾಧಿಸಿದ್ದು, ಸರಕಾರದ ನಿರೀಕ್ಷೆಯಂತೆ ಆದಾಯ ಬಂದಿಲ್ಲ. 2024-25ನೇ ಹಣಕಾಸು ವರ್ಷದಲ್ಲಿ ಜನವರಿ ಅಂತ್ಯಕ್ಕೆ 29,460 ಕೋಟಿ ರೂ. ಆದಾಯ ಸಂಗ್ರಹಣೆ ಆಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ 3,910 ಕೋಟಿ ರೂ. ಹೆಚ್ಚುವರಿ ರಾಜಸ್ವ ಸಂಗ್ರಹಣೆಯಾಗಿದೆ. ದೇಶೀಯ ಮದ್ಯ (ಐಎಂಎಲ್) ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯ (ಎಇಡಿ) ಹೆಚ್ಚಳದಿಂದಾಗಿ ರಾಜಸ್ವ ಸಂಗ್ರಹ ಏರಿಕೆಯಾಗಿದೆ. ಆದರೆ, ಮದ್ಯದ ವಹಿವಾಟು ಕುಸಿದಿದೆ.
ಐಎಂಎಲ್ ವಹಿವಾಟು ಶೇ. 4.02 ಹಾಗೂ ಬಿಯರ್ ವಹಿವಾಟು ಶೇ. 54.92ರಷ್ಟು ಇಳಿಕೆಯಾಗಿದೆ. ವಹಿವಾಟು ಕುಸಿತದ ನಡುವೆಯೂ ಅಬಕಾರಿ ಇಲಾಖೆಯು 2026-27ನೇ ಹಣಕಾಸು ವರ್ಷಕ್ಕೆ ಆದಾಯ ಸಂಗ್ರಹಣೆ ಗುರಿಯನ್ನು ಶೇ. 10ರಷ್ಟು ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಲೆಕ್ಕಾಚಾರದಂತೆ ಇಲಾಖೆಯ ಆದಾಯ ಸಂಗ್ರಹಣೆ ಗುರಿ 4,300 ಕೋಟಿ ರೂ. ಏರಿಕೆಯಾಗುವ ಸಾಧ್ಯತೆಯಿದೆ.
ಅಗ್ಗದ ಬೆಲೆಯ ಮದ್ಯಗಳು ಮದ್ಯಪ್ರಿಯರಿಗೆ ಹೆಚ್ಚು ಅಚ್ಚುಮೆಚ್ಚು. ರಾಜ್ಯದಲ್ಲಿ ಸೆಮಿ ಪ್ರೀಮಿಯಂ ಹಾಗೂ ಪ್ರೀಮಿಯಂ ವಿದೇಶಿ ಮದ್ಯಕ್ಕೆ ಹೋಲಿಸಿದರೆ ಅಗ್ಗದ ಬೆಲೆಯ ಮದ್ಯಗಳ ಮಾರಾಟ ಹೆಚ್ಚಿದೆ. ಅಬಕಾರಿ ಇಲಾಖೆಯಿಂದ ಸರಕಾರದ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲೂ ಅಗ್ಗದ ಮದ್ಯಗಳು ಸಿಂಹಪಾಲು ಹೊಂದಿವೆ. ಬೆಲೆ ಕಡಿಮೆ ಎಂಬ ಕಾರಣಕ್ಕೆ ಜನರು ಅಗ್ಗದ ಬೆಲೆಯ ಮದ್ಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಹೀಗಾಗಿ, ಅಗ್ಗದ ಮದ್ಯಗಳ ದರವನ್ನೇ ಹೆಚ್ಚಿಸಲಾಗುತ್ತದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಮದ್ಯದ ಬ್ರಾಂಡ್‌ಗಳನ್ನು ಬೆಲೆಯ ಅನುಸಾರ 16 ಸ್ಲ್ಯಾಬ್‌ಗಳಾಗಿ ವಿಂಗಡಿಸಲಾಗಿದೆ. ಒಂದರಿಂದ ಐದನೇ ಸ್ಲ್ಯಾಬ್‌ವರೆಗಿನ ಅಗ್ಗದ ಬೆಲೆಯ ಮದ್ಯಗಳ ಮಾರಾಟದಿಂದ ಸರಕಾರಕ್ಕೆ ಅತಿ ಹೆಚ್ಚು ಶೇ. 75ರಷ್ಟು ಆದಾಯ ಬರುತ್ತದೆ. ಆರರಿಂದ 12ನೇ ಸ್ಲ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ. 20ರಷ್ಟು ಮತ್ತು 13ರಿಂದ 16ರವರೆಗಿನ ಸ್ಲ್ಯಾಬ್‌ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ. 5ರಷ್ಟು ಆದಾಯ ಬರುತ್ತದೆ. ಆದಾಯದ ಲೆಕ್ಕಾಚಾರದಲ್ಲೇ ಸರಕಾರ ಎರಡರಿಂದ ಐದನೇ ಸ್ಲ್ಯಾಬ್‌ವರೆಗಿನ ಅಗ್ಗದ ಮದ್ಯಗಳ ದರವನ್ನು ಶೇ. 12ರಷ್ಟು ಹೆಚ್ಚಳ ಮಾಡುವ ಅಂದಾಜಿದೆ.
ಬಜೆಟ್ ಅಧಿವೇಶನ ಬಳಿಕ ಏರಿಕೆ ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಘೋಷಿಸಿದರೆ ಪ್ರತಿಭಟನೆ ನಡೆಯಬಹುದೆಂಬ ಕಾರಣಕ್ಕೆ ಸರಕಾರ ಬಜೆಟ್ ಅಧಿವೇಶನದ ಬಳಿಕ ದರ ಹೆಚ್ಚಿಸಲು ನಿರ್ಧರಿಸಿದೆ. ಮುಖ್ಯಮಂತ್ರಿಯವರು ಬಜೆಟ್‌ನಲ್ಲಿಅಬಕಾರಿ ಇಲಾಖೆಗೆ ಹೆಚ್ಚುವರಿ ಆದಾಯ ಸಂಗ್ರಹಣೆ ಗುರಿ ಮಾತ್ರ ನಿಗದಿಪಡಿಸಲಿದ್ದಾರೆ. ಬಳಿಕ ಮಧ್ಯದಲ್ಲಿ ಮದ್ಯದ ದರ ಏರಿಕೆ ಮಾಡಬಹುದೆಂಬುದು ಸರಕಾರದ ಲೆಕ್ಕಾಚಾರವಾಗಿದೆ.

