ಬೆಂಗಳೂರು, ಫೆ. 04 : ಜಂಟಿ ಅಧಿವೇಶನದ ಕೊನೆಯ ದಿನವೂ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಸಾಕ್ಷಿಯಾಯಿತು. ಮಂಗಳವಾರ ಅಹೋರಾತ್ರಿ ಹೋರಾಟ ನಡೆಸಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಬುಧವಾರ ಸದನ ಆರಂಭ ಆಗ್ತಿದ್ದಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಕೊಡಲೇ ಬೇಕು ಕೊಡಲೇ ಬೇಕು ರಾಜೀನಾಮೆ ಕೊಡಲೇ ಬೇಕು, ಭಾರತ್ ಮಾತಾಕೀ ಜೈ, ಕರ್ನಾಟಕ ಲೂಟಿ ಲೂಟಿ, ರಾಹುಲ್ ಗಾಂಧಿ ಕೋಟಿ ಕೋಟಿ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಬಿಜೆಪಿ ಸದಸ್ಯರ ಘೋಷಣೆ ನಡುವೆಯೂ ಮನರೇಗಾದ ಕುರಿತಾಗಿ ಕಾಂಗ್ರೆಸ್ ಸದಸ್ಯರು ಮನರೇಗಾದ ಕುರಿತಾಗಿ ಅಭಿಪ್ರಾಯ ಮಂಡಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ವಿಪಕ್ಷ ನಾಯಕ ಆರ್ ಅಶೋಕ್, ” ಅಬಕಾರಿ ಇಲಾಖೆಯಲ್ಲಿ ಆರು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಐದು ದಾಖಲೆ ನೀಡಲಾಗಿದೆ. ಖಜಾನೆಯ ದುಡ್ಡು ಲೂಟಿ ಆಗಿದೆ. ಮೊದಲು ರಾಜೀನಾಮೆ ಕೊಡಲಿ” ಎಂದು ಆಗ್ರಹಿಸಿದರು.
ಈ ಹಿಂದೆ ಕೆ ಜೆ ಜಾರ್ಜ್, ಕೆ ಎಸ್ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು. ನಮಗೆ ನೈತಿಕತೆಯ ಪಾಠ ಹೇಳಲಾಗ್ತಿದೆ, ಆದರೆ ಸರ್ಕಾರಕ್ಕೆ ನೈತಿಕತೆ ಏನಿದೆ? ಎಂದು ಗರಂ ಆದರು. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಎಟಿಎಂ ಅಲ್ಲ, ಬದಲಾಗಿ ಕರ್ನಾಟಕ ರಿಸರ್ವ್ ಬ್ಯಾಂಕ್ ಆಗಿದೆ. ಕೂಡಲೇ ತಿಮ್ಮಾಪೂರ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಬಿಜೆಪಿ ಪ್ರತಿಭಟನೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, “ಅಬಕಾರಿ ಹಗರಣದ ಬಗ್ಗೆ ಸಾಕ್ಷಿ ಎಲ್ಲಿದೆ? ಸುಳ್ಳು ಏಕೆ ಹೇಳುತ್ತೀರಾ? ಬಿಜೆಪಿ ಸದಸ್ಯರನ್ನು ಸದನದಿಂದ ಹೊರ ಹಾಕಿ” ಎಂದು ಒತ್ತಾಯಿಸಿದರು. ಅಲ್ಲದೆ ಕೋನರೆಡ್ಡಿ ಕೂಡಾ ಆಕ್ರೋಶ ವ್ಯಕ್ತಪಡಿಸಿ, ವಿನಾ ಕಾರಣ ಆರೋಪ ಮಾಡಲಾಗ್ತಿದೆ. ಈ ರೀತಿಯಲ್ಲಿ ಗದ್ದಲ ಮಾಡಿದರೆ ಮಾತನಾಡುವುದು ಹೇಗೆ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಪಕ್ಷ ಸದಸ್ಯರ ಪ್ರತಿಭಟನೆಗೆ ತಿರುಗೇಟು ನೀಡಿದ ಸ್ಪೀಕರ್ ಯು.ಟಿ ಖಾದರ್ ಇವತ್ತು ರಾತ್ರಿ 12 ಗಂಟೆಯ ತನಕ ಸದನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

