ಶಿವಮೊಗ್ಗ, ಆ. 02 : ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಶೆಡ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವಿಗೀಡಾದ ಘಟನೆ ಭಾನುವಾರ ಬೆಳಗಿನಜಾವ ನಡೆದಿದೆ.
ಮೃತಪಟ್ಟವರು ಕೊಪ್ಪಳ ಜಿಲ್ಲೆಯ ಮಲ್ಲಿಕಾರ್ಜುನ, ಪತ್ನಿ ನಾಗವೇಣಿ ಹಾಗೂ ಮೂರು ವರ್ಷದ ಮಗು ಸಂತೋಷ್. ಬೆಳಗಿನ ಜಾವ ನಡೆದ ಘಟನೆ. ತೀರ್ಥಹಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ನದಿಗಳು ಅಪಾಯಕಾರಿ ಸ್ಥಿತಿಯಲ್ಲಿ ಹರಿಯುತ್ತಿವೆ.
ನಿಧಾನಕ್ಕೆ ಸುರಿಯುತ್ತಿದ್ದ ಮುಂಗಾರು ಮಳೆ 4 ದಿನಗಳಿಂದೀಚೆ ತಾಲೂಕಿನಲ್ಲಿರಭಸವಾಗಿದ್ದು ತುಂಗಾ, ಕುಶಾವತಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ತುಂಗಾ, ಮಾಲತಿ ನದಿ ಅಬ್ಬರಿಸಿ ಕೆಂಪೇರಿ ಹರಿಯುತ್ತಿದ್ದು, ಮುಂಗಾರು ಮಳೆ ಆರಂಭವಾಗಿ 2 ತಿಂಗಳ ನಂತರ ಮೊದಲ ಬಾರಿಗೆ ಪ್ರವಾಹ ಮಟ್ಟದಲ್ಲಿದೆ.
ಮಾಲತಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಭತ್ತದ ಗದ್ದೆ, ಅಡಕೆ ತೋಟ ಮುಳುಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕ ಗ್ರಾಮದಲ್ಲಿ ತುಂಗಾನದಿ ತೀರದ ಸಾಗುವಳಿ ಪ್ರದೇಶ ಪ್ರವಾಹದ ಸುಳಿಗೆ ಸಿಕ್ಕಿದೆ. ತೀರ್ಥಹಳ್ಳಿ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ ಸಮೀಪದ ತುಂಗಾನದಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀರಾಮಮಂಟಪ ಮುಳುಗುವ ಹಂತ ಮುಟ್ಟಿದೆ. ನದಿ ತೀರದಲ್ಲಿಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.


