ಚಿಕ್ಕಮಗಳೂರು, ಡಿ. 17 : ಹೃದಯಾಘಾತ ಎಂಬ ಮಾರಕ ಕಾಯಿಲೆಯು ಇದೀಗ ಯುವ ಪೀಳಿಗೆಯನ್ನೇ ಬಲಿ ಪಡೆಯುತ್ತಿದೆ. ಏಕಾಏಕಿ ಹೃದಯಾಘಾತಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಬಾಳಿ ಬೆಳಕಾಗಬೇಕಾದವರು ಇಂದು ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ 22 ವರ್ಷದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ದಿಶಾ (22) ಎಂದು ಗುರುತಿಸಲಾಗಿದೆ. ದಿಶಾ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದಾಗ, ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಹೃದಯಾಘಾತ ಎಂಬುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಣ್ಣ ಪ್ರಾಯದವರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಸಮಾಜದ ಆತಂಕಕ್ಕೂ ಕಾರಣವಾಗಿದೆ.

