ಮಧುರೈ, ಜ. 22 : ಇದು ಸಾಮಾಜಿಕ ಜಾಲತಾಣದ ಯುಗ ಎಂದರೆ ತಪ್ಪಾಗಲಾರದು. ಹಾಗಂತ ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲವನ್ನೂ ಸತ್ಯ ಎಂದು ತಿಳಿದುಕೊಂಡರೆ ಅದು ಅನಾಹುತಕ್ಕೆ ಕಾರಣವಾಗಬಹುದು. ಮಧುರೈ ನಲ್ಲಿ ಅಂತಹುದೇ ಒಂದು ಘಟನೆ ವರದಿಯಾಗಿದೆ. ಯೂ ಟ್ಯೂಬ್ ನಲ್ಲಿ ಹಾಕಲಾದ ವೀಡಿಯೋವೊಂದನ್ನು ನೋಡಿ, ಅದೇ ಔಷಧವನ್ನು ಸೇವಿಸಿದ ಯುವತಿ ಕೊನೆಗೆ ನರಳಿ ನರಳಿ ಉಸಿರು ಚೆಲ್ಲಿದ್ದಾಳೆ.
ಯುಟ್ಯೂಬ್ ನಲ್ಲಿ ವಿಡಿಯೋವೊಂದನ್ನು ನೋಡಿ ತೂಕ ಕಳೆದುಕೊಳ್ಳಲೆಂದು ಔಷಧ ಸೇವನೆ ಸೇವನೆ ಮಾಡಿದ್ದ 19 ವರ್ಷದ ಯುವತಿ ದಾರುಣವಾಗಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಮಧುರೈನ ನರಿಮೇಡುವಿನಲ್ಲಿರುವ ಖಾಸಗಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸ್ಥಳೀಯ ಪೂರೈಕೆದಾರರಿಂದ ಖರೀದಿಸಿದ “ವೆಂಕಾರಂ” (ಬೊರಾಕ್ಸ್) ಸೇವಿಸಿ ಸಾವನ್ನಪ್ಪಿದ್ದಾಳೆ. ಇಂಟರ್ನೆಟ್ ನಲ್ಲಿ ನೋಡಿದ ವಿಡಿಯೋದಲ್ಲಿ ನೀಡಲಾದ ಸಲಹೆಯನ್ನು ಅನುಸರಿಸಿ ಸೇವಿಸಿದ್ದಳು ಎಂದು ತಿಳಿದು ಬಂದಿದೆ.
ಕಲೈಯರಸಿ ಎಂಬ ವಿದ್ಯಾರ್ಥಿನಿ ತೂಕ ಇಳಿಸಿಕೊಳ್ಳುವ ವಿಧಾನಗಳನ್ನು ಹುಡುಕುತ್ತಿದ್ದಾಗ ‘ಕೊಬ್ಬು ಕರಗಿಸಿ ಸ್ಲಿಮ್ ದೇಹಕ್ಕಾಗಿ ”ವೆಂಕಾರಂ” ಎಂದು ಲೇಬಲ್ ಮಾಡಲಾದ ವಿಡಿಯೋ ನೋಡಿದ್ದಾಳೆ. ಪೊಲೀಸ್ ದಾಖಲೆಗಳ ಪ್ರಕಾರ, ಕಲೈಯರಸಿ ಜನವರಿ 16 ರಂದು ಕೀಳಮಸಿ ಬೀದಿಯ ಥೆರ್ಮುಟ್ಟಿ ಬಳಿಯ ಸಾಂಪ್ರದಾಯಿಕ ಔಷಧ ಅಂಗಡಿಗೆ ಔಷಧ ಖರೀದಿಗೆ ಭೇಟಿ ನೀಡಿದ್ದರು. ಮರುದಿನ ಅದನ್ನು ಸೇವಿಸಿದ್ದಳು. ಸ್ವಲ್ಪ ಸಮಯದೊಳಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಂಡಿತ್ತು. ಬಳಿಕ ತಾಯಿಯೊಂದಿಗೆ ಮುನಿಸಲೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಡಿಸ್ಟಾರ್ಜ್ ಆದ ನಂತರ, ಆ ಸಂಜೆ ಮತ್ತೆ ಲಕ್ಷಣಗಳು ಉಲ್ಬಣವಾಗಿದ್ದವು. ಹೊಟ್ಟೆ ನೋವು ತೀವ್ರವಾಗಿ ಮಲದಲ್ಲಿ ರಕ್ತ ಸ್ರಾವವೂ ತೀವ್ರವಾಗಿದೆ. ಸರಿಸುಮಾರು ರಾತ್ರಿ 11 ಗಂಟೆಗೆ, ವಾಂತಿ ಮತ್ತು ಅತಿಸಾರ ತೀವ್ರವಾಗಿ ಕಂಗಾಲಾದ ಬಳಿಕ ನೆರೆಹೊರೆಯವರು ಒಟ್ಟಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಆಸ್ಪತ್ರೆ ಸಿಬಂದಿ ದಾಖಲಾಗುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಪೊಲೀಸ್ ದಾಖಲೆಗಳ ಪ್ರಕಾರ ತಿಳಿದು ಬಂದಿದೆ.
ಸೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆನ್‌ಲೈನ್ ವಿಷಯ ಮತ್ತು ಇದೇ ರೀತಿಯ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಗಳು ಅಗತ್ಯವಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಪ್ರಕರಣವು ಪರಿಶೀಲಿಸದ ಡಿಜಿಟಲ್ ವಿಷಯದಿಂದ ಆರೋಗ್ಯ ಸೂಚನೆಗಳನ್ನು ಪಾಲಿಸುವುದರಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ. ಯೂಟ್ಯೂಬ್, ಫೇಸ್ ಬುಕ್ ಅಥವಾ ಇನ್ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಸಲಹೆ ಸೂಚನೆಗಳನ್ನು ನಿಜವೆಂದು ತಿಳಿದುಕೊಳ್ಳುವ ಮೊದಲು ನಾವು ಸತ್ಯಾಂಶವನ್ನು ಪರಿಸೀಲಿಸಬೇಕಾಗುತ್ತದೆ. ಅಗತ್ಯ ಬಿದ್ದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

