ವೇಣೂರು, ಜು. 20 : ರಸ್ತೆ ದಾಟುತ್ತಿದ್ದ ಟೆಂಪೋ ಟ್ರಾವೆಲರ್ ಢಿಕ್ಕಿಯಾಗಿ ಗಂಭೆರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ವೇಣೂರು ಮುಖ್ಯಪೇಟೆಯಲ್ಲಿ ಜು. 19 ರಂದು ರಸ್ತೆ ದಾಟುತ್ತಿದ್ದ ವೇಳೆ ಬಜಿರೆ ಗ್ರಾಮದ ಕಂಗಿತ್ತಿಲು ನಿವಾಸಿ ಆನಂದ ಪೂಜಾರಿ (60) ಎಂಬವರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವೇಣೂರು ಮುಖ್ಯಪೇಟೆಯ ಬಸ್ ನಿಲ್ದಾಣದ ಬಳಿ ಹೆದ್ದಾರಿ ದಾಟುತ್ತಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಮೂಡುಬಿದಿರೆ ಕಡೆಗೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋ ಟ್ರಾವೆಲ್ಲರ್ (ಕೆ.ಎ. 02, ಎಬಿಂ667) ಡಿಕ್ಕಿಯಾಗಿತ್ತು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಇವರನ್ನು ವೇಣೂರಿನ ನಮನ ಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿತ್ತು. ಆದರೆ ಸಂಜೆವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಟ್ರಾವೆಲ್ಲರ್ ಅನ್ನು ವಶಕ್ಕೆ ಪಡೆದುಕೊಂಡಿರುವ ವೇಣೂರು ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಮಾರು ವರ್ಷಗಳ ಹಿಂದೆ ವೇಣೂರಿನಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಇವರು ಉತ್ತಮ ಟೈಲರ್ ಎಂದು ಪ್ರಸಿದ್ಧಿ ಪಡೆದಿದ್ದರು. ಪ್ರಸ್ತುತ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


