ಕೋಲ್ಕತ್ತ, ಏ. 24 : ಇಡೀ ದೇಶದ ಗಮನ ಸೆಳೆದಿರುವ ಚುನಾವಣೆಯದು ಪಶ್ಚಿಮ ಬಂಗಾಳ ರಾಜ್ಯದ್ದು, ಎಸ್ಐಆರ್ ಪ್ರಕ್ರಿಯೆ ಮತ್ತು ತೃಣಮೂಲ ಕಾಂಗ್ರೆಸ್ – ಬಿಜೆಪಿ ನಡುವಿನ ಜಿದ್ದಾಜಿದ್ದಿಯ ಹಿನ್ನಲೆಯಲ್ಲಿ, ಶಾಂತಿಯುತ ಮತದಾನ ನಡೆಯುವುದೇ ಎನ್ನುವ ಅನುಮಾನಕ್ಕೆ ಬಂಗಾಳದ ಮತದಾರ ಉತ್ತರ ನೀಡಿದ್ದಾನೆ. ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಯನ್ನು ಹೊರತು ಪಡಿಸಿದರೆ, ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಹದಿನಾರು ಜಿಲ್ಲೆಗಳ 152 ಕ್ಷೇತ್ರಕ್ಕೆ ನಿನ್ನೆ (ಏಪ್ರಿಲ್ 23) ಮೊದಲ ಹಂತದ ಮತದಾನ ನಡೆದಿತ್ತು. ಸ್ವಾತಂತ್ರ್ಯಾನಂತರದ ಪಶ್ಚಿಮ ಬಂಗಾಳದಲ್ಲಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿ, ಬಂಗಾಳದ ಮತದಾರ ಮತಗಟ್ಟೆಯಲ್ಲಿ ತನ್ನ ಹಕ್ಕನ್ನು ಚಲಾಯಿಸಿದ್ದಾನೆ. ಶೇ. 91.78 ಮತದಾನ ನಡೆದಿದೆ. ಮತದಾರರ ಅಭೂತಪೂರ್ವ ಪ್ರತಿಕ್ರಿಯೆಗೆ ಬಿಜೆಪಿ ಫುಲ್ ಖುಷ್ ಆಗಿದೆ.
ಪಶ್ಚಿಮ ಬಂಗಾಳದ (ಮೊದಲ ಹಂತ) ಜೊತೆಗೆ, ತಮಿಳುನಾಡಿನಲ್ಲೂ ಭಾರೀ ಸಂಖ್ಯೆಯಲ್ಲಿ (ಶೇ. 84.69) ಜನರು ವೋಟ್ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ, ಮತದಾರರ ತೋರಿದ ಸ್ಪಂದನೆಗೆ ಶಹಬ್ಬಾಸ್ ಜೊತೆಗೆ ಧನ್ಯವಾದವನ್ನು ಸಲ್ಲಿಸಿದೆ. ಬಿಜೆಪಿಯು, ಸಾಮಾಜಿಕ ಜಾಲತಾಣದಲ್ಲಿ ವೋಟಿಂಗ್ ಪರ್ಸಟೇಂಜ್ ಅನ್ನು ಹಾಕಿ, ಜೈ ಶ್ರೀರಾಮ್ ಎನ್ನುವ ಟ್ಯಾಗ್ ಲೈನ್ ಮೂಲಕ, ಹಂಚಿಕೊಳ್ಳುತ್ತಿದೆ.
ಮೇ ನಾಲ್ಕಕ್ಕೆ ಸಿಹಿ, ಜಾಲ್’ಮುರಿ ಜೊತೆ ಸಂಭ್ರಮಿಸೋಣ – ಮೋದಿ
ಬಿಜೆಪಿಯ ನಾಯಕರು, ಅದರಲ್ಲೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣೆಯಲ್ಲಿ ಈ ಬಾರಿ ಗೆಲುವು ಪಕ್ಕಾ ಎನ್ನುವ ದಾಟಿಯಲ್ಲೇ ಪ್ರಚಾರವನ್ನು ಮಾಡಿದ್ದಾರೆ. ಗುರುವಾರ, ಎರಡನೇ ಹಂತದ ಚುನಾವಣೆ ನಡೆಯುವ ಕೃಷ್ಣಾನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದ ಪ್ರಧಾನಿ, ಮೇ ನಾಲ್ಕರಂದು ನಾವು ಮಿಠಾಯಿಯನ್ನೂ ಹಂಚುತ್ತೇವೆ, ಜಾಲ್’ಮುರಿಯನ್ನೂ ಹಂಚುತ್ತೇವೆ ಎಂದು ಹೇಳಿದ್ದರು. ಮುಂದುವರಿಯುತ್ತಾ, ಟಿಎಂಸಿ (ತೃಣಮೂಲ ಕಾಂಗ್ರೆಸ್) ಗೂಂಡಾಗಳು, ಏಪ್ರಿಲ್ 29ರೊಳಗೆ ಶರಣಾಗತರಾಗಿ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು. ಇದು, ಗೆಲುವಿನ ಬಗ್ಗೆ ಸಿಕ್ಕಿರಬಹುದಾದ ಆಂತರಿಕ ಗುಪ್ತಚರ ವರದಿಯ ಭಾಗವಾಗಿರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಹಲವು, ಚುನಾವಣಾಪೂರ್ವ ಸಮೀಕ್ಷೆಗಳು, ಟಿಎಂಸಿ – ಬಿಜೆಪಿ ನಡುವೆ, ನೆಕ್-ಟು-ನೆಕ್ ಫೈಟ್ ಇರಲಿದೆ ಎನ್ನುವ ಫಲಿತಾಂಶವನ್ನೂ (ಎರಡು ವಾರದ ಹಿಂದೆ) ನೀಡಿದ್ದವು. ಇದೀಗ ದಾಖಲೆಯ ಮತದಾನ ನಡೆದಿರುವುದು ಬಿಜೆಪಿಗೆ ಸಿಕ್ಕ ಮುನ್ಸೂಚನೆಯೇ ಎಂಬುದು ಕುತೂಹಲ !
ಸಾಮಾನ್ಯವಾಗಿ, ಮತದಾನದ ಪ್ರಮಾಣ ಹೆಚ್ಚಾದಾಗ, ಅದು, ಆಡಳಿತ ವಿರೋಧಿ ಅಲೆಯ ಕಾರಣ ಎನ್ನುವುದು, ಭಾರತದ ಚುನಾವಣಾ ರಾಜಕೀಯದಲ್ಲಿ ಹೆಚ್ಚಾಗಿ ವಿಶ್ಲೇಷಣೆಯಾಗುತ್ತಿರುವುದು. ಹಾಗಂತ, ಆಡಳಿತ ಪರ ಆಗಬಾರದು ಎಂದೇನೂ ಇಲ್ಲ. ಬೆಂಗಾಳಿ ಅಸ್ಮಿತೆ, ನಾನು ಏಕಾಂಗಿ, ಎಸ್ಐಆರ್ ಮುಂತಾದ ವಿಚಾರಗಳು, ಟಿಎಂಸಿ ಮತದಾರರನ್ನು ಮತಗಟ್ಟೆಗೆ ಸೆಳೆದಿರಲೂ ಬಹುದು. ಆದರೆ, ಎಸ್ಐಆರ್ ಪ್ರಕ್ರಿಯೆ ಬಗ್ಗೆ ಬಂಗಾಳದಲ್ಲಿ ತೀವ್ರ ವಿರೋಧವೇನೂ ವ್ಯಕ್ತವಾಗಿಲ್ಲ ಎನ್ನುವುದು ವಾಸ್ತವತೆ.
ಬಂಗಾಳದ ಇತಿಹಾಸವೇ ಹಾಗೇ, 33 ವರ್ಷ ಕಮ್ಯೂನಿಸ್ಟರು (ಸಿಪಿಐ ಎಂ), ಇದಾದ ನಂತರ, 15 ವರ್ಷ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳವನ್ನು ಆಳಿದ್ದಾರೆ. ಈ ಬಾರಿ ಗೆಲುವು ಸಿಕ್ಕರೆ, ಟಿಎಂಸಿಗೆ ಇದು ನಾಲ್ಕನೇ ಟರ್ಮ್. ಸುದೀರ್ಘವಾಗಿ ಅಧಿಕಾರದಲ್ಲಿದ್ದಾಗ, ಆಡಳಿತ ವಿರೋಧಿ ಅಲೆ ಹೆಚ್ಚಾಗುವುದೇ ಜಾಸ್ತಿ. ಬಿಜೆಪಿಯ ಸಂಭ್ರಮಕ್ಕೆ (ದಾಖಲೆ ಮತದಾನ) ಇದೊಂದು ಕಾರಣ ಇರಬಹುದು. ವೋಟ್ ಮಾಡಿ ಹೊರಬಂದ ಮತದಾರರನ್ನು ವಾಹಿನಿಗಳು ಪ್ರತಿಕ್ರಿಯೆಯನ್ನು ಕೇಳಿದಾಗ, ಆಡಳಿತ ವಿರೋಧಿ ಅಲೆ ಎನ್ನುವ ಅಂಶವೇ ಹೆಚ್ಚಾಗಿ ಕೇಳಿ ಬರುತ್ತಿದೆ. ಎಸ್ಐಆರ್ ಪ್ರಕ್ರಿಯೆ ಕೂಡಾ, ಕೇಂದ್ರ ಸರ್ಕಾರದ ಸರಿಯಾದ ಕ್ರಮ ಎನ್ನುವ ಮಾತುಗಳೂ ಕೇಳಿ ಬಂದಿವೆ. ಆದರೆ, ಇವೆಲ್ಲವೂ, ಫಲಿತಾಂಶ ಏನು ಬರಬಹುದು ಎನ್ನುವುದಕ್ಕೆ ಭದ್ರವಾದ ಮಾತಂತೂ ಅಲ್ಲ. ಆದರೂ, ಬಿಜೆಪಿ ಸಂಭ್ರಮಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯ ಪನ್ನಾ ಪ್ರಮುಖ್ ಕಾರ್ಯಕರ್ತರ ಪಕ್ಷನಿಷ್ಠೆ
ಅಧಿಕ ಮತದಾನದ ಪ್ರಮಾಣದ ಬಗ್ಗೆ ರಾಜಕೀಯ ವಿಶ್ಲೇಷಕರು ಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಆಡಳಿತ ವಿರೋಧಿ ಅಲೆ (Anti – Incumbency) ಅಥವಾ ಆಡಳಿತ ಪರವೂ ಆಗಿರಬಹುದು ಎನ್ನುವ ಸೂಚನೆ ಎನ್ನುವುದು ಇವರ ಅಭಿಪ್ರಾಯವಾಗಿದೆ. ಆದರೆ, ಮೊದಲ ಹಂತದ ಚುನಾವಣೆಯಲ್ಲಿ, ಬಿಜೆಪಿಯ ’ಪನ್ನಾ ಪ್ರಮುಖ್’ ಕಾರ್ಯಕರ್ತರು, ತಮ್ಮ ಮತದಾರರನ್ನು ಮನೆಯಿಂದ ಹೊರಗೆ ಬರುವಂತೆ ಮಾಡಿ, ಮತ ಚಲಾಯಿಸುವಂತೆ ಮಾಡಿದ್ದಾರೆ ಎನ್ನುವುದು ಗ್ರೌಂಡ್ ರಿಪೋರ್ಟ್. ಇದು, ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವುದು ಕಮಲ ಪಡೆಯ ವಿಶ್ವಾಸದ ಮಾತು.
ಮಹಿಳಾ ಮತದಾರರ ದಾಖಲೆಯ ವೋಟಿಂಗ್
ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆಯಲ್ಲಿ ಮಹಿಳಾ ಮತದಾರರು ಮತ್ತು ಮೊದಲ ಬಾರಿ ವೋಟ್ (First Time Voters) ಮಾಡುತ್ತಿರುವವರು, ಉತ್ಸಾಹವನ್ನು ತೋರಿದ್ದಾರೆ. ಇವರನ್ನು, ಚುನಾವಣೆಯ ಭಾಷೆಯಲ್ಲಿ ಸೈಲೆಂಟ್ ವೋಟರ್ಸ್ ಎಂದು ಬಿಂಬಿಸಲಾಗುತ್ತದೆ. ಮಹಿಳಾ ಮೀಸಲಾತಿ ಬಿಲ್ ಬಿದ್ದು ಹೋದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿರುವ ಹಿನ್ನಲೆಯಲ್ಲಿ, ಇದರ ಕ್ರೆಡಿಟ್ ತಮಗೆ ಸಿಗಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿರಬಹುದು.
ದೇಶದ ಮೂಡ್ ಆಫ್ ನೇಶನ್, ಸಮೀಕ್ಷೆಗಳ ಪ್ರಕಾರ, ಮಹಿಳಾ ಮತದಾರರು ಮತ್ತು ಫಸ್ಟ್ ಟೈಮ್ ವೋಟರ್ಸ್, ಒಲವು ಬಿಜೆಪಿ ಕಡೆ ಹೆಚ್ಚಿರುವುದು ಗೊತ್ತಿರುವ ವಿಚಾರ. ಈ ಎಲ್ಲಾ ಹಿನ್ನಲೆಯಲ್ಲಿ, ಬಿಜೆಪಿಯು, ವೋಟಿಂಗ್ ಪ್ರಮಾಣವನ್ನು ನೋಡಿ, ಸಂಭ್ರಮಿಸುತ್ತಿರಬಹುದು ಎನ್ನುವುದು ರಾಜಕೀಯ ಪಂಡಿತರ ವ್ಯಾಖ್ಯಾನವಾಗಿದೆ.

