ದಾವಣಗೆರೆ, ಜು. 29 : ಹನ್ನೊಂದು ತಿಂಗಳ ಮಗುವೊಂದು ಔಷಧಿ ಸೇವಿಸಿದ ಕೆಲವೆ ಸಮಯಗಳಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಹೊನ್ನಾಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಅವಧಿ ಮುಗಿದ ಔಷಧಿ ನೀಡಿದ ಪರಿಣಾಮ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.
ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಮಗು ಸಾವನ್ನಪ್ಪಿದೆ. ಗ್ರಾಮದ ವಸುಂಧರ ಹಾಗೂ ಲೋಕೇಶ್ ದಂಪತಿಯ 11 ತಿಂಗಳ ಪುತ್ರಿ ಪೂರ್ವಿಕ ಸಾವನ್ನಪ್ಪಿದ ಬಾಲಕಿ. ಅನಾರೋಗ್ಯದ ಹಿನ್ನೆಲೆ ಸಾಸ್ವೆಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಿದ್ದರು. ವೈದ್ಯರು ಕೊಟ್ಟ ಔಷಧಿ ಹಾಕಿದ ತಕ್ಷಣ ಮಗು ಆರೋಗ್ಯದಲ್ಲಿ ಎರುಪೇರಾಗಿದೆ ಎಂದು ತಿಳಿದುಬಂದಿದೆ.
ಔಷಧಿ ಹಾಕಿದ ಕೆಲವೇ ಕ್ಷಣದಲ್ಲಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


