ಬೆಳ್ತಂಗಡಿ, ಆ. 04 : ತಾಲೂಕಿನ ಹಲವು ಭಾಗಗಳಲ್ಲಿ ಸ್ಥಳೀಯರ ಮಾಹಿತಿ ಪ್ರಕಾರ ಎರಡು ಅಪಾಯಕಾರಿ ಕಾಡಾನೆಗಳು ನಿರಂತರವಾಗಿ ಸಂಚರಿಸುತ್ತಿದ್ದು, ಅವು ಗಳನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ಆ. 03ರಂದು ತಾಲೂಕು ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಆನೆ ದಾಳಿಯ ಬಗ್ಗೆ ಸದಾ ಜಾಗರೂಕರಾಗಿದ್ದುಕೊಂಡು, ಸಾರ್ವಜನಿಕರ ರಕ್ಷಣೆಗಾಗಿ ಕ್ರಮ ವಹಿಸಬೇಕು ಎಂದರು. ಅಲ್ಲದೆ, ಜನರ ಪ್ರಾಣ ತೆಗೆಯುತ್ತಿರುವ ಆನೆಯನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಸರಕಾರಕ್ಕೆ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಆನೆ ದಾಳಿಗೆ ಮೃತ ವ್ಯಕ್ತಿಯ ಕುಟುಂಬಕ್ಕೆ 20 ಲಕ್ಷ ಪರಿಹಾರ :
ರೆಖ್ಯ ಗ್ರಾಮದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರು. ಪರಿಹಾರ ಮಂಜೂರಾಗಿದ್ದು, ಮೊದಲ ಹಂತವಾಗಿ 5 ಲಕ್ಷ ರು. ಚೆಕ್ ವಿತರಿಸಲಾಗಿದೆ ಎಂದು ಪೂಂಜ ತಿಳಿಸಿದರು. ಅಲ್ಲದೆ, ವೈಯಕ್ತಿಕ ನೆಲೆಯಲ್ಲಿ ಮೃತರ ಮಗಳಿಗೆ ಒಂದು ಉತ್ತಮವಾದ ಉದ್ಯೋಗವನ್ನು ದೊರಕಿಸಿಕೊಡುವ ಭರವಸೆಯನ್ನೂ ನೀಡಿದರು.





