ಶಿರ್ಲಾಲು, ಸೆ. 10 : ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.) ಶಿರ್ಲಾಲು ಇದರ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಕೆ. ಹಾಗೂ ಪ್ರಭಾಕರ್ ಅವರು ನಿವೃತ್ತ ಸೌಲಭ್ಯಗಳು ನೀಡಿಲ್ಲ ಎಂದು ಆರೋಪಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದರು. ಆದರೆ, ಬ್ಯಾಂಕ್ ಅಧ್ಯಕ್ಷರಾದ ಸುಧೀರ್ ಸುವರ್ಣ ಅವರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಸೂಕ್ತ ಭರವಸೆ ನೀಡಿದ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.

ಬ್ಯಾಂಕ್ ಮುಂಭಾಗದಲ್ಲಿ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಕೆ. ಹಾಗೂ ನಿವೃತ್ತ ಸಿಬ್ಬಂದಿ ಪ್ರಭಾಕರ್ ಅವರು ನಿವೃತ್ತಿಯ ನಂತರ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ, ಧರಣಿ ಸತ್ಯಾಗ್ರಹ ಕೈಗೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.) ಶಿರ್ಲಾಲು ಇದರ ಅಧ್ಯಕ್ಷರಾದ ಸುಧೀರ್ ಸುವರ್ಣ ಅವರು “ನಿವೃತ್ತರಿಗೆ ಸಿಗಬೇಕಾದ ಸೌಲಭ್ಯಗಳಲ್ಲಿ ನಾವು ಯಾವುದೇ ಹಸ್ತಕ್ಷೇಪವನ್ನು ಮಾಡಿಲ್ಲ. ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ಸಾಧ್ಯವೋ ಆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದರು.

ಅಧ್ಯಕ್ಷರ ಭರವಸೆಯ ಬಳಿಕ ಹೋರಾಟಗಾರರಾದ ಶ್ರೀ ಅಮ್ಮಾಜಿ ಕೆ. ಹಾಗೂ ಶ್ರೀ ಪ್ರಭಾಕರ್ ಅವರು ತಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು. ಧ್ವನಿ ನ್ಯೂಸ್ ಜೊತೆಗೆ ಮಾತನಾಡಿದ ಪ್ರಭಾಕರ್ ಅವರು, “ನಮ್ಮ ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ತಾಲೂಕು ಮಟ್ಟದಲ್ಲಿ ಹೋರಾಟ ಸಂಘಟಿಸುತ್ತೇವೆ ಎಂದು ಹೇಳಿದವರು ಕೂಡಾ ಹೋರಾಟ ನಡೆಸಬಾರದು. ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.) ಶಿರ್ಲಾಲು ಇದರ ಶ್ರೇಯೋಭಿವೃದ್ಧಿಗಾಗಿ ನಾವೆಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಹೇಳಿದರು.
ಬಳಿಕ, ಹೋರಾಟಗಾರರ ಜೊತೆ ಮಾತುಕತೆ ನಡೆಸಿದ ಸಿಎ ಬ್ಯಾಂಕ್ ಅಧ್ಯಕ್ಷರು, “ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ಇಲಾಖೆಯ ಸೂಚನೆಯ ಮೂಲಕವೇ ನಾವು ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಕೆ. ಹಾಗೂ ನಿವೃತ್ತ ಸಿಬ್ಬಂದಿ ಪ್ರಭಾಕರ್ ಅವರ ಜೊತೆಗೆ ಮಾತುಕತೆ ನಡೆಸುತ್ತೇವೆ. ಸಿಗಬೇಕಾದ ಸೌಲಭ್ಯಗಳಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಯಾವುದೇ ಹಸ್ತಕ್ಷೇಪ ಮಾಡದೆ ನ್ಯಾಯಯುತವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಭರವಸೆ ನೀಡಿದರು.




