ಅಳದಂಗಡಿ : ಸುವರ್ಣ ಸಂಭ್ರಮದ ಸಂಭ್ರಮದೊಂದಿಗೆ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Advertisement

ಅಳದಂಗಡಿ, ಆ. 27 : ಸುವರ್ಣ ಸಂಭ್ರಮದ ಐತಿಹಾಸಿಕ ಯಶಸ್ಸಿನ ಸಂಭ್ರಮದೊಂದಿಗೆ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಕೇಶ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ, ಆ.27ರಂದು ಅಳದಂಗಡಿಯ ನಮನ ಸಭಾಭವನದಲ್ಲಿ ನಡೆಯಿತು.

ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ರಾಕೇಶ್ ಹೆಗಡೆ ಅವರು, ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘವು ಸದಸ್ಯರ ವಿಶ್ವಾಸ ಮತ್ತು ಸಹಕಾರದಿಂದ ನಿರಂತರ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ₹517 ಕೋಟಿ ವ್ಯವಹಾರ ನಡೆಸಿ, ಸಂಘದ ಇತಿಹಾಸದಲ್ಲೇ ದಾಖಲೆಯ ₹2 ಕೋಟಿ 12 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದಲ್ಲಿ ಪ್ರಸ್ತುತ ₹39 ಕೋಟಿ ಠೇವಣಿ, ₹5 ಕೋಟಿ 82 ಲಕ್ಷ ಪಾಲು ಬಂಡವಾಳ ಹಾಗೂ ₹37 ಕೋಟಿ ಹೊರಬಾಕಿ ಸಾಲವಿದ್ದು, ಸಾಲ ವಸೂಲಾತಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಈ ಸಾಲಿನಲ್ಲಿ ಸಂಘವು ಶೇ.98.89ರಷ್ಟು ಸಾಲ ವಸೂಲಾತಿ ಸಾಧಿಸಿದೆ ಎಂದು ತಿಳಿಸಿದರು.

Advertisement


ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ವಿಶೇಷವಾಗಿ ಸಂಘದ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ, ಸದಸ್ಯರು ತಮ್ಮ ಡಿವಿಡೆಂಡ್‌ನ ಶೇ.2ರಷ್ಟನ್ನು ಸುವರ್ಣ ಸಂಭ್ರಮ ನಿಧಿಗೆ ಸ್ವಯಂಪ್ರೇರಿತವಾಗಿ ದೇಣಿಗೆಯಾಗಿ ನೀಡಿರುವುದು ಸಂಘದ ಮೇಲಿನ ಸದಸ್ಯರ ಪ್ರೀತಿ, ವಿಶ್ವಾಸ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಮಹಾಸಭೆಯ ಅಂಗವಾಗಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.

Advertisement

ಬೆಳೆ ವಿಮೆಯಿಂದ ಕೋಟ್ಯಂತರ ಪರಿಹಾರ

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಸಂಘದ ಸದಸ್ಯರು ಸುಮಾರು ₹45 ಲಕ್ಷ ಬೆಳೆ ವಿಮೆ ಕಂತು ಪಾವತಿಸಿದ್ದು, ಬೆಳೆ ನಷ್ಟಕ್ಕೊಳಗಾದ ರೈತರಿಗೆ ₹5.81 ಕೋಟಿಗೂ ಅಧಿಕ ಪರಿಹಾರ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

2025-26ನೇ ಸಾಲಿನಲ್ಲಿ ಸುಮಾರು 1,446 ಸದಸ್ಯರು ₹55 ಲಕ್ಷ ಮೊತ್ತದ ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿಯೂ ಇದುವರೆಗೆ 1,408 ಸದಸ್ಯರು ಸುಮಾರು ₹60 ಲಕ್ಷ ವಿಮೆ ಕಂತು ಪಾವತಿಸುವ ಮೂಲಕ ತಮ್ಮ ಬೆಳೆಗಳಿಗೆ ಭದ್ರತೆ ಪಡೆದುಕೊಂಡಿದ್ದಾರೆ. ಈ ಯೋಜನೆಯ ಪ್ರಯೋಜನವನ್ನು ಎಲ್ಲ ಕೃಷಿಕರು ಪಡೆಯುವಂತೆ ಅವರು ಮನವಿ ಮಾಡಿದರು.

ಕೃಷಿ ಭೂಮಿ ಖರೀದಿ ಸಾಲ ಯೋಜನೆ

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಂಭ್ರಮದ ಈ ಐತಿಹಾಸಿಕ ಸಂದರ್ಭದಲ್ಲಿ, ಸದಸ್ಯರ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಘವು ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ಅದೇ “ಕೃಷಿ ಭೂಮಿ ಖರೀದಿ ಸಾಲ ಯೋಜನೆ”.

ಕೃಷಿಯೇ ನಮ್ಮ ಬದುಕಿನ ಆಧಾರ. ಆದರೆ ಇಂದಿನ ದಿನಗಳಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಚಟುವಟಿಕೆಯನ್ನು ವಿಸ್ತರಿಸುವುದು ಸಾಮಾನ್ಯ ರೈತನಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ತಮ್ಮ ಕೃಷಿ ಚಟುವಟಿಕೆಯನ್ನು ವಿಸ್ತರಿಸಬೇಕು, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಹಾಗೂ ಮುಂದಿನ ಪೀಳಿಗೆಗೂ ಕೃಷಿಯೊಂದಿಗೆ ಭದ್ರವಾದ ಭವಿಷ್ಯವನ್ನು ರೂಪಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಸಂಘ ನಿರ್ಧರಿಸಿದೆ ಎಂದು ಹೇಳಿದರು.


ಸಾಲದೊಂದಿಗೆ ವಿಮಾ ರಕ್ಷಣೆ

ಸಂಘದ ಸದಸ್ಯರಿಗೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಅವರ ಹಾಗೂ ಅವರ ಕುಟುಂಬದ ಭದ್ರತೆಯನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ಸದಸ್ಯರಿಗೆ ಆಕಸ್ಮಿಕ ಮರಣ ಸಂಭವಿಸಿದಾಗ ಅಥವಾ ಮನೆಗೆ ಹಾನಿಯಾದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ವಿಮೆಯ ಮೂಲಕ ಆರ್ಥಿಕ ರಕ್ಷಣೆ ದೊರೆಯುವ ಉದ್ದೇಶದಿಂದ ಈ ಬಾರಿ ಸಾಲಕ್ಕೆ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಸಂಘದ ಅಭಿವೃದ್ಧಿ ಕಾರ್ಯಗಳು, ಸದಸ್ಯರಿಗೆ ದೊರೆಯುತ್ತಿರುವ ವಿವಿಧ ಸಾಲ ಸೌಲಭ್ಯಗಳು, ಕೃಷಿ ಹಾಗೂ ಇತರ ಸೇವೆಗಳು, ಶಾಖೆಗಳ ಮೂಲಕ ನೀಡಲಾಗುತ್ತಿರುವ ಸೇವೆಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಹಾಸಭೆಯಲ್ಲಿ ವಿವರಿಸಲಾಯಿತು.

ಸಂಘದ ಆರ್ಥಿಕ ಬೆಳವಣಿಗೆಯ ಜೊತೆಗೆ ಸದಸ್ಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ನಿರೀಕ್ಷೆಗೆ ತಕ್ಕಂತೆ ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಜನಸ್ನೇಹಿ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸಂಘ ಬದ್ಧವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಹಾಗೂ ಆಡಳಿತ ಮಂಡಳಿಯ ಮುಂದಿನ ಯೋಜನೆಗಳನ್ನು ಸದಸ್ಯರ ಮುಂದೆ ಮಂಡಿಸಲಾಯಿತು. ಸದಸ್ಯರು ಸಂಘದ ಅಭಿವೃದ್ಧಿ ಹಾಗೂ ಸೇವೆಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ವ್ಯಕ್ತಪಡಿಸಿದರು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಮರ್ಪಕ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ