ಆಂಧ್ರ ಪ್ರದೇಶ, ಜು. 14 : ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿ. ಜೋಸೆಫ್ ವಿಜಯ್ ಅವರಂತೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಕೂಡ ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಅನ್ನೋದು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ತೆಲಂಗಾಣ, ಆಂಧ್ರ ಪ್ರದೇಶದ ತೆಲುಗು ರಾಜ್ಯಗಳಲ್ಲಿ ಈ ಸುದ್ದಿ ಸಂಚಲನ ಸೃಷ್ಟಿಸಿದ್ದು, ಈಗಾಗಲೇ ದೇಶದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ಜೊತೆ ರಹಸ್ಯವಾಗಿ ಸಮಾಲೋಚನೆ ನಡೆಸಿದ್ದಾರೆ ಅಂತಲೂ ತಿಳಿದು ಬಂದಿದೆ. ಪುಷ್ಪ-2 ವೇಳೆ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಜೊತೆ ಉಂಟಾದ ವಿವಾದಗಳಿಂದಾಗಿ ರೇವಂತ್ ರೆಡ್ಡಿ ಸರ್ಕಾರವನ್ನ ಗುರಿಯಾಗಿಸಿಕೊಂಡು ತೆಲಂಗಾಣದಲ್ಲಿ ರಾಜಕೀಯಕ್ಕೆ ಇಳಿಯುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಹೈದರಾಬಾದ್, ನಿಜಾಮಾಬಾದ್ ಮತ್ತು ಖಮ್ಮಮ್ ನಂತಹ ಕಡೆಗಳಲ್ಲಿ ಅವರಿಗೆ ಇರುವ ದೊಡ್ಡ ಅಭಿಮಾನಿ ಬಳಗವೇ ಅವರಿಗೆ ಪ್ಲಸ್ ಆಗುತ್ತದೆ ಎಂಬ ವಾದ ಒಂದೆಡೆಯಾದರೆ, ಅಲ್ಲು ಅರ್ಜುನ್ ಅವರ ಕಾಪು ಸಮುದಾಯದ ಗಟ್ಟಿ ಮತಬ್ಯಾಂಕ್ ಇರುವ ಆಂಧ್ರ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂದು ಇನ್ನು ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ.
ಆದರೆ ಈ ಎಲ್ಲಾ ಊಹಾಪೋಹಗಳ ನಡುವೆ, ಅಲ್ಲು ಅರ್ಜುನ್ ಟೀಮ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಅಲ್ಲು ಅರ್ಜುನ್ ಅವರ ಗಮನ ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಮಾತ್ರ ಇದೆ ಎಂದು ಹೇಳಿದೆ. ಪುಷ್ಪ-2 ಯಶಸ್ಸಿನ ನಂತರ ಅವರ ಕೈಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್ ಗಳು ಇವೆ. ಜೊತೆಗೆ ನಟನಾಗಿ ಇನ್ನೂ ಅನೇಕ ಪಾತ್ರಗಳನ್ನ ಮಾಡಬೇಕು ಎಂಬ ಆಸೆ ಅವರಿಗಿದೆ. ಆದ್ದರಿಂದ ರಾಜಕೀಯದ ಬಗ್ಗೆ ಅವರು ಈಗ ಯೋಚನೆ ಮಾಡುತ್ತಿಲ್ಲ ಅಂದಿದೆ.


