ಬಂಟ್ವಾಳ, ಜು. 17 : ಬಿಸಿರೋಡ್ ಬಸ್ ನಿಲ್ದಾಣದಲ್ಲಿ ಅಮಾಯಕ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ, “ಭಜರಂಗ ದಳದ ಮುಖಂಡ ಚೇತನ” ಹಾಗೂ “ಭಜರಂಗ ದಳದ ಶಾಖೆಯಿಂದ ತರಬೇತಿ ಪಡೆದಿದ್ದ” ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಪೊಲೀಸ್ ಠಾಣೆಗೆ ವಿಹಿಂಪ ನ ಉಪಾಧ್ಯಕ್ಷ ಕೇಶವರವರು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಆರೋಪಿಯ ತಿರುಚಿದ ಭಾವಚಿತ್ರ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸ್ ಆಪ್ ಗುಂಪುಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಲಾಗಿದ್ದು, ಇದರಿಂದ ಸಮಾಜದಲ್ಲಿ ಕೋಮು ಉದ್ವಿಗ್ನತೆ ಮತ್ತು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಕಾನೂನುಬಾಹಿರ ಕೃತ್ಯ ಎಸಗಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


