ವಿಜಯಪುರ, ಏ. 29 : ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಜನರನ್ನು ಸುಡುತ್ತಿರುವ ಭೀಕರ ಬಿಸಿಲಿಗೆ ವಿಜಯಪುರ ಜಿಲ್ಲೆಯಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ತೀವ್ರ ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮುದ್ದೇಬಿಹಾಳ ತಾಲೂಕಿನ ಇಂಗಳಗಿ-ಟಕ್ಕಳಕಿ ಗ್ರಾಮದ ಶ್ರೀಶೈಲ ಬಸವಂತಪ್ಪ ಬಿರಾದಾರ (15) ಚಿಕಿತ್ಸೆ ಫಲಿಸದೆ ಬುಧವಾರ ಸಾವನ್ನಪ್ಪಿದ್ದಾನೆ.
ಹೀಟ್ ಸ್ಟ್ರೋಕ್ ಶಂಕೆ :
ನಾಲತವಾಡ ಹೋಬಳಿ ವ್ಯಾಪ್ತಿಯ ಕೃಷ್ಣಾ ನದಿ ತೀರದ ನಿವಾಸಿಯಾದ ಶ್ರೀಶೈಲ ಬಸವಂತಪ್ಪ ಬಿರಾದಾರ, ಇತ್ತೀಚೆಗಷ್ಟೇ 7ನೇ ತರಗತಿ ಪೂರೈಸಿ 8ನೇ ತರಗತಿಗೆ ದಾಖಲಾಗಬೇಕಿತ್ತು. ಓದು ಹಾಗೂ ಆಟೋಟಗಳಲ್ಲಿ ಅತ್ಯಂತ ಚುರುಕಾಗಿದ್ದ ಈ ಬಾಲಕ, ಬಿಸಿಲಿನಲ್ಲೇ ಆಟವಾಡಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಎನ್ನಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಿಸಿಲಿನ ಹೊಡೆತಕ್ಕೆ ಒಳಗಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

