ಬೆಳ್ತಂಗಡಿ, ಜು. 31 : ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಸುಮಾರು 7,60,000 ರೂ ಮೌಲ್ಯದ ಮಾದಕ ವಸ್ತುಗಳನ್ನು ಬೆಳ್ತಂಗಡಿ ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
29.07.2026 ರಂದು ರಾತ್ರಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಆನಂದ ಎಂ ಹಾಗೂ ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಪಿಲಿಚಂಡಿಕಲ್ಲು ಎಂಬಲ್ಲಿ ಆಟೋ ರಿಕ್ಷಾವೊಂದರ ಬಳಿ ವ್ಯಕ್ತಿಯೋರ್ವ ಪೊಲೀಸರನ್ನು ಕಂಡು ಅನುಮಾನಾಸ್ಪದವಾಗಿ ವರ್ತಿಸಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಅಲಿಯಾಸ್ ಅನ್ಸರ್ (21) ಎಂದು ತಿಳಿದು ಬಂದಿದೆ.
ಆತನ ತಪಾಸಣೆ ಮಾಡಿದಾಗ 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ. ಇನ್ನು ಸ್ಥಳದಲ್ಲಿದ್ದ ರಿಕ್ಷಾ ಹಾಗೂ ಕಾರನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದಾಗ 7,60,000 ರೂ. ಮೌಲ್ಯದ 76.59 ಗ್ರಾಂ ತೂಕದ ನಿಷೇಧಿತ ಎಂಡಿಎಂಎ ಪತ್ತೆಯಾಗಿದೆ. ಬಂಧಿತ ಅನ್ಸರ್‌ಗೆ ಮಾದಕ ವಸ್ತು ಪೂರೈಸಲೆಂದು ಬಂದ ಮತ್ತೋರ್ವ ಆರೋಪಿ ಅಮ್ಜತ್ ಖರಾರ್ ಎಂಬಾತನು ಪೊಲೀಸರನ್ನು ಕಂಡು ತಾನು ತಂದಿದ್ದ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

