ಮಂಗಳೂರು, ಅ. 23 : ಶ್ರೀ ಪ್ರಮೋದ್ ಕರ್ಕೇರ ಅವರ ನೇತೃತ್ವದಲ್ಲಿ ಹಾಗೂ ಶ್ರೀ ರವಿರಾಜ್ ಚೌಟ ಅವರ ಸಹಭಾಗಿತ್ವದಲ್ಲಿ ಮಂಗಳೂರಿನ ದೀಪಾ ಕಂಫರ್ಟ್ಸ್ ಬಳಿ 5ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಉದ್ಯಮಿ ಶ್ರೀ ಸೂರಜ್ ಕುಮಾರ್ ಕಲ್ಯ ಅವರು ತಮ್ಮ ದಿವ್ಯ ಹಸ್ತದಿಂದ ದೀಪ ಬೆಳಗಿಸಿ, ಪಿಲಿ ಅಜನೆ ಕಾರ್ಯಕ್ರಮವು ನೂರು ವರ್ಷಗಳನ್ನು ದಾಟಿ ವಿಜೃಂಭಿಸಲಿ ಎಂದು ಶುಭ ಹಾರೈಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, “ಕಳೆದ ಐದು ವರ್ಷಗಳಿಂದ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಿದ್ದೇನೆ. ಬಹಳ ಶಿಸ್ತುಬದ್ಧವಾಗಿ ಹಾಗೂ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಶ್ರೀ ಪ್ರಮೋದ್ ಕರ್ಕೇರ ಅವರ ನಾಯಕತ್ವವು ಯುವ ಸಮೂಹಕ್ಕೆ ಮಾದರಿಯಾಗಿದೆ,” ಎಂದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, “ಪಿಲಿ ಅಜನೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಶ್ರೀ ಪ್ರಮೋದ್ ಕರ್ಕೇರ ಅವರು ಸಾಮಾಜಿಕ ಸೇವೆಯ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ, ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪಿಲಿ ಅಜನೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ,” ಎಂದರು.

ಶಾಸಕ ಭರತ್ ಶೆಟ್ಟಿ ಅವರು ಮಾತನಾಡಿ, “ಪಿಲಿ ಅಜನೆ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಶ್ರೀ ಪ್ರಮೋದ್ ಕರ್ಕೇರ ಅವರ ನಾಯಕತ್ವದಲ್ಲಿ ಯುವ ಸಮೂಹ ಒಗ್ಗಟ್ಟಾಗುತ್ತಿದೆ. ಅವರು ಯುವ ನಾಯಕರಾಗಿ ಬೆಳೆಯುತ್ತಿದ್ದಾರೆ,” ಎಂದರು.

ಇನ್ನು ಉದ್ಘಾಟನಾ ವೇದಿಕೆಯಲ್ಲಿ ತುಳು ಸಿನಿಮಾ ಹಾಸ್ಯ ನಟ ಹಾಗೂ ಶ್ರೀಮಂತ ರಾಜ ಗುಳಿಗ ಕ್ಷೇತ್ರ ಬಂದಲೆ ಇದರ ಧರ್ಮದರ್ಶಿ ಶ್ರೀ ಸತೀಶ್ ಬಂದಲೆ, ರಹೇಶ್, ಆಶ್ರಿತ್ ನೊಂಡ, ಶ್ರೀ ರಕ್ಷಿತ್ ಆರ್. ಪೂಜಾರಿ, ಶ್ರೀ ಯಶ್ಪಾಲ್ ಸಾಲಿಯಾನ್, ಸಚಿನ್ ರಾಜ್ ರೈ , ರವೀಂದ್ರ, ತಿಲಕ್ ರಾಜ್, ಕಾರ್ತಿಕ್, ರಂಜಿತ್, ಹಿತೇಶ್ ಬೇಕಲ್, ವಿನೋದ್ ಹರ್ಷಿತ್, ಜಯೇಶ್, ಅನಿಲ್ ಕರ್ಕೇರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಪೊಳಲಿ ಟೈಗರ್ಸ್ ತಂಡದ ಮಾಲೀಕರಾದ ಪೊಳಲಿ ಸಂತು, ಬರ್ಕೆ ಫ್ರೆಂಡ್ಸ್ ತಂಡದ ಮಾಲೀಕರಾದ ಯಜ್ಞೇಶ್ವರ ಬರ್ಕೆ ಹಾಗೂ ಮನೋಜ್ ಕುಮಾರ್ ಅವರನ್ನು ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


5ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮದಲ್ಲಿ ಸಾಯಿ ಚೆಂಡೆ ಟ್ರೂಪ್ ಬಳಗದಿಂದ ಚೆಂಡೆ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ವೇದಿಕೆಯಲ್ಲಿ ಗ್ರೂಪ್ ಎಕ್ಸ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ವೈಭವ, ಭಕ್ತಿಭಾವದ ಸಂಗಮವಾಗಿ ಗುರುಕುಲ ಬಾಲಗೋಕುಲ ಪಾವೂರು ಹರೇಕಳ ತಂಡದಿಂದ ಕುಣಿತ ಭಜನೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬರ್ಕೆ ಫ್ರೆಂಡ್ಸ್ (ರಿ.) ತಂಡದಿಂದ ಸಾಹಸಮಯ ಹುಲಿ ಕುಣಿತ ಪ್ರದರ್ಶನ ನಡೆಯಿತು.

ಸಾವಿರಾರು ಭಕ್ತಾದಿಗಳು ಪಿಲಿ ಅಜನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜೆ ಮನೋಜ್ ಕಾರ್ಯಕ್ರಮ ನಿರ್ವಹಿಸಿದರು.




