ಬೆಳ್ತಂಗಡಿ, ಅ. 23 : 14 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ನಡೆದ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ.
ಡಿಎನ್‌ಎ ಪರೀಕ್ಷೆಗಾಗಿ ಅ.23ರಂದು ಸಂಜೆ ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
ಎಸ್‌ಐಟಿಯ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ಸಮ್ಮುಖದಲ್ಲಿ ವೈದ್ಯಕೀಯ ತಂಡದವರು ಬೆಳ್ತಂಗಡಿ ನ್ಯಾಯಾಲಯದಲ್ಲಿ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಮುಚ್ಚಿದ ಕೋಣೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು ವೀಡಿಯೋ ಚಿತ್ರೀಕರಣ ಮಾಡಲಾಗಿದೆ. ರಕ್ತದ ಮಾದರಿಯನ್ನು ಎಸ್.ಐ.ಟಿ. ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ ಇದೀಗ ಸೌಜನ್ಯ ಪ್ರಕರಣದ ಮರು ತನಿಖೆಯನ್ನು ಚುರುಕುಗೊಳಿಸಿದೆ. ಈ ಹಿಂದೆ ತನಿಖೆ ನಡೆಸಿರುವ ಬೆಳ್ತಂಗಡಿ ಠಾಣಾ ಪೊಲೀಸರು, ಸಿಐಡಿ ಮತ್ತು ಸಿಬಿಐಯಿಂದ ಮಾಹಿತಿ ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು ಇದರ ಮುಂದುವರಿದ ಭಾಗವಾಗಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.
ಈ ವೇಳೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ನ್ಯಾಯಾಲಯಕ್ಕೆ ಆಗಮಿಸಿದ್ದರು.

