ಬೆಳ್ತಂಗಡಿ, ಆ. 01 : ತಾಲೂಕಿನಲ್ಲಿ ಜು. 31ರ ರಾತ್ರಿಯಿಂದ ನಿರಂತರವಾಗಿ ಧಾರಕಾರ ಮಳೆ ಸುರಿಯುತ್ತಲೇ ಇದೆ. ತಾಲೂಕಿನಲ್ಲಿರುವ ನೇತ್ರಾವತಿ ನದಿ ಸೇರಿದಂತೆ ಎಲ್ಲಾ ನದಿಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟವನ್ನು ಮೀರುತ್ತಿದೆ. ಹೀಗಾಗಿ ತಗ್ಗು ಪ್ರದೇಶ, ನದಿ ತೀರದ ನಿವಾಸಿಗಳು ಆದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು ಉತ್ತಮ.

ಲಾಯಿಲ ಕಿಲ್ಲೂರು ರಸ್ತೆಯ ಪುತ್ರಬೈಲು ಸೇತುವೆಯು ನದಿ ನೀರಿನಿಂದ ಮುಳುಗಡೆಯಾಗಿದೆ. ಮುಂಡಾಜೆ ಭಾಗದಲ್ಲಿ ನದಿ ನೀರು ತೋಟಗಳಿಗೆ ನುಗ್ಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಸೋಮಂತ್ತಡ್ಕ ಧರ್ಮಸ್ಥಳ ರಸ್ತೆಯ ಗುಂಡಿ ದೇವಸ್ಥಾನ ಭಾಗದಲ್ಲಿ ರಸ್ತೆಗೆ ಗುಡ್ಡ ಜರಿದು ಬಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ. ಸದ್ಯ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಶಿಶಿಲದ ಕಿಂಡಿ ಅಣೆಕಟ್ಟು ಕೂಡಾ ಭಾರೀ ಮಳೆಗೆ ಮುಳುಗಡೆಯಾಗಿದೆ. ಇನ್ನು, ತಾಲೂಕಿನ ಹಲವು ಕಡೆಗಳಲ್ಲಿ ನದಿ ನೀರಿನ ಪ್ರವಾಹ ಹೆಚ್ಚಾಗಿದ್ದು, ಜನತೆ ಆತಂಕಗೊಂಡಿದ್ದಾರೆ. ಮೊಗ್ರು, ಇಳಂತಿಲ ಭಾಗದಲ್ಲೂ ಅನಾಹುತಗಳಾಗಿರುವ ಮಾಹಿತಿ ದೊರೆತಿದೆ.


