ಗುಜರಾತ್, ಜು. 15 : ಬ್ಲ್ಯಾಕ್ ಮೇಲ್ ಮಾಡಿ ವಿವಾಹಿತ ಮಹಿಳೆಯನ್ನು ಬೆದರಿಸಿ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಆರೋಪದ ಮೇರೆಗೆ 20 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ದಂಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ.
ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ನೆರೆಮನೆ ನಿವಾಸಿ ಮಹಿಳೆಯ ಸ್ನಾನ ಮಾಡುತ್ತಿದ್ದ ಸಂದರ್ಭ ವೀಡಿಯೋ ಚಿತ್ರೀಕರಿಸಿ, ಆ ಮೂಲಕ ವಿದ್ಯಾರ್ಥಿಯು ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.
ಹತ್ಯೆಗೀಡಾದ ವಿದ್ಯಾರ್ಥಿಯನ್ನು ಹಾರ್ದಿಕ್ ಎಂದು ಗುರುತಿಸಲಾಗಿದೆ. ಕೊಲೆ ನಡೆಸಿದ ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹಾರ್ದಿಕ್ ಹಾಗೂ ಆರೋಪಿಗಳು ನೆರೆಮನೆಯ ನಿವಾಸಿಗಳು. ಸುಮಾರು ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆತ ಗುಪ್ತವಾಗಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಬಳಿಕ ಆ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಮಹಿಳೆಯ ಜೊತೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅವಮಾನದ ಭಯದಿಂದ ಮಹಿಳೆ ಆತನ ಒತ್ತಡಕ್ಕೆ ಮಣಿದು, ಆತನಿಗೆ ಒಪ್ಪಿಗೆ ನೀಡಿದ್ದಳೆನ್ನಲಾಗಿದೆ. ಆರೋಪಿತ ಮಹಿಳೆಯ ಪತಿ ಫ್ಯಾನ್ ದುರಸ್ತಿ ಹಾಗೂ ವಿದ್ಯುತ್ ವೈರಿಂಗ್ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.
ಕೊಲೆಗೀಡಾದ ಆರೋಪಿ ಪದೇ ಪದೇ ಮಹಿಳೆಯನ್ನು ಬೆದರಿಸಿ, ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಮಧ್ಯೆ, ಹಾರ್ದಿಕ್ ಜೊತೆ ತನ್ನ ಪತ್ನಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದನ್ನು ಪತಿ ಗಮನಿಸಿದ್ದು, ಇದರಿಂದ ದಂಪತಿ ನಡುವೆ ಜಗಳವೂ ನಡೆದಿದೆ. ಈ ವೇಳೆ ಪತ್ನಿ ತನ್ನ ಮೇಲೆ ನಡೆದಿದ್ದ ಕಿರುಕುಳದ ಬಗ್ಗೆ ಪತಿಗೆ ಸಂಪೂರ್ಣ ಮಾಹಿತಿ ನೀಡಿದ್ದಾಳೆ.
ತನ್ನ ಪತ್ನಿಗಾದ ಶೋಷಣೆಯ ಬಗ್ಗೆ ಆಕ್ರೋಶಗೊಂಡ ಪತಿ, ಹಾರ್ದಿಕ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ. ಹಾರ್ದಿಕ್ ಕೊಲೆ ಸಂಚಿಗೆ ಆತನ ಪತ್ನಿಯೂ ಸಹಕರಿಸಿದ್ದಾಳೆ ಎನ್ನಲಾಗಿದೆ. ಯೋಜನೆಯಂತೆ ಜುಲೈ 11ರ ಬೆಳಿಗ್ಗೆ ಮಹಿಳೆ ಹಾರ್ದಿಕ್‌ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಳು. ಅದಕ್ಕೂ ಮುನ್ನ ಪತಿ ಕೆಲಸಕ್ಕೆ ತೆರಳುವಂತೆ ಬೈಕ್‌ನಲ್ಲಿ ಮನೆಯಿಂದ ಹೊರಟು ನಾಟಕವಾಡಿದ್ದ. ಬೆಳಗ್ಗೆ ಸುಮಾರು 9.10ರ ವೇಳೆಗೆ ಹಾರ್ದಿಕ್ ತನ್ನ ತಂದೆಗೆ ಕರೆ ಮಾಡಿ ಪರ್ಬತ್ಪುರ ಪ್ರದೇಶದಲ್ಲಿ ಜಮೀನು ನೋಡಲು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ, ಪತಿ ಮನೆಯಲ್ಲಿ ಇಲ್ಲವೆಂದು ಭಾವಿಸಿ ಮಹಿಳೆಯ ಮನೆಗೆ ಹಾರ್ದಿಕ್ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನ ದಂಪತಿಯ ಮೂವರು ಮಕ್ಕಳು ಶಾಲೆಗೆ ತೆರಳಿದ್ದರು.
ಮಹಿಳೆಯ ಕರೆಯಂತೆ ಮನೆಗೆ ಬಂದ ಹಾರ್ದಿಕ್ ಮಹಿಳೆಯೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ. ಈ ವೇಳೆ ಯೋಜನೆಯಂತೆ ಪತಿ ಮನೆಗೆ ಪ್ರವೇಶಿಸಿ ಹಾರ್ದಿಕ್‌ನ ಎದೆಯ ಮೇಲೆ ಕುಳಿತಿದ್ದಾನೆ. ಇದೇ ವೇಳೆ ಮಹಿಳೆ ಹಾರ್ದಿಕ್‌ನ ಕೈಗಳನ್ನು ಹಿಡಿದುಕೊಂಡಿದ್ದಳು. ಬಳಿಕ ಪತಿ ತನ್ನ ಕುತ್ತಿಗೆಯಲ್ಲಿದ್ದ ಸ್ಕಾರ್ಫ್‌ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಫ್ಯಾನ್‌ನ ವಿದ್ಯುತ್ ಕೇಬಲ್‌ನಿಂದ ಮತ್ತೊಮ್ಮೆ ಕುತ್ತಿಗೆ ಬಿಗಿದು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ದಂಪತಿ, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮನೆಗೆ ಬೀಗ ಹಾಕಿ ಬೈಕ್‌ನಲ್ಲಿ ಹೊರಟಿದ್ದಾರೆ. ಆ ಬಳಿಕ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮಹಿಳೆಯ ತಂದೆಯ ಮನೆಗೆ ಬಿಟ್ಟು ನಗರದಿಂದ ಪರಾರಿಯಾಗಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಈ ಸಂಬಂಧ ಹಾರ್ದಿಕ್ ತಂದೆ ರಮೇಶ್‌ಜಿ ಠಾಕೋರ್ ನೀಡಿದ ದೂರಿನ ಆಧಾರದ ಮೇಲೆ ಕಲೋಲ್ ತಾಲ್ಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ತನಿಖೆ ವೇಳೆ ಹಾರ್ದಿಕ್ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಿಸಿ ಅದನ್ನು ಆಧಾರವನ್ನಾಗಿ ಮಾಡಿಕೊಂಡು ಲೈಂಗಿಕ ಸಂಬಂಧಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ಆ ವಿಡಿಯೋವನ್ನು ಮಹಿಳೆ ಅಥವಾ ಆಕೆಯ ಪತಿ ಎಂದಿಗೂ ನೋಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆದ ಬಳಿಕ ಹಾರ್ದಿಕ್‌ನ ಮೊಬೈಲ್ ಫೋನ್ ಅನ್ನು ಪತಿ ಕೋಪದಲ್ಲಿ ಒಡೆದು ರಸ್ತೆ ಬದಿಗೆ ಎಸೆದಿದ್ದಾನೆ ಎನ್ನಲಾಗಿದೆ. ಮೊಬೈಲ್ ವಶಪಡಿಸಿಕೊಳ್ಳಲು ಆರೋಪಿಗಳ ಪೊಲೀಸ್ ಕಸ್ಟಡಿ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲೋಲ್ ತಾಲೂಕು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.


