ಬೆಂಗಳೂರು, ಮೇ. 05 : ಜೈಲಿನಲ್ಲಿ ತಮಗೆ ಆಹಾರದಂತಹ ಮೂಲಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ಕರ್ನಾಟಕ ಸರಕಾರದಿಂದ ವರದಿ ಕೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ನಟ ದರ್ಶನ್‌ರ ಮನವಿ ಮೇರೆಗೆ ರಾಜ್ಯ ಸರಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ, ” 2025ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್, ದರ್ಶನ್ ಮತ್ತು ಪ್ರಕರಣದ ಇತರೆ ಆರೋಪಿಗಳ ಜಾಮೀನು ರದ್ದುಪಡಿಸಿತ್ತು. ನಂತರ ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಬೆಳಕಿಲ್ಲ ಮತ್ತು ಅವರಿಗೆ ಆಹಾರವೂ ಸಿಗುತ್ತಿಲ್ಲ. ಜೈಲಿನಲ್ಲಿ ದರ್ಶನ್ ಅವರಿಗೆ ಪಂಚತಾರಾ ಸೌಲಭ್ಯ ನೀಡಬಾರದೆಂದು ನ್ಯಾಯಾಲಯ ಆದೇಶಿಸಿದ್ದ ಕಾರಣಕ್ಕೆ ಅವರಿಗೆ ಮೂಲಸೌಕರ್ಯ ನಿರಾಕರಿಸಲಾಗುತ್ತಿದೆ,” ಎಂದು ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿಗಳು, ”ಈವರೆಗೆ ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಮತ್ತು ರಾಜ್ಯವು ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲು ಉದ್ದೇಶಿಸಿದೆ ಎಂಬುದನ್ನು ತಿಳಿಯ ಬಯಸುತ್ತೇವೆ. ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ಮುಕ್ತಾಯಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆಯೂ ನಮಗೆ ಸ್ಪಷ್ಟತೆ ಬೇಕು. ಪ್ರಕರಣದ ವಿಚಾರಣೆಯ ಸ್ಥಿತಿಗತಿ ಕುರಿತು ಶೀಘ್ರವೇ ವರದಿ ಸಲ್ಲಿಸಬೇಕು,” ಎಂದು ಸರಕಾರಕ್ಕೆ ನಿರ್ದೇಶಿಸಿದರು.
”ವಿಚಾರಣಾಧೀನ ಕೈದಿಗೆ ಅರ್ಹವಾದ ಮೂಲಸೌಕರ್ಯಗಳನ್ನು ಜೈಲಿನಲ್ಲಿ ಒದಗಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ರಾಜ್ಯದಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಒಂದು ವಾರದೊಳಗೆ ಸೂಕ್ತ ವರದಿಗಳು ಬರುವಂತೆ ರಿಜಿಸ್ಟ್ರಿ ನೋಡಿಕೊಳ್ಳಬೇಕು,” ಎಂದು ಪೀಠ ಹೇಳಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ನಟಿ ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

