ನವದೆಹಲಿ, ಜು. 23 : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ ಬೆನ್ನಲ್ಲೇ ಕಠಿನ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಮುಂಜಾಗ್ರತಾ ಬಂಧನ ಕೈಗೊಳ್ಳುವ ದೆಹಲಿ ಪೊಲೀಸರ ಅಧಿಕಾರವನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿರುವುದಾಗಿ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ (CIP) ನೇತೃತ್ವದ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಈ ಅಧಿಕಾರ ನೀಡಲಾಗಿದೆ ಎಂಬ ವರದಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ CJP ಜೂನ್ 20ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕಳೆದ ಕೆಲವು ದಿನಗಳಿಂದ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೂ ಕಾರಣವಾಗಿದೆ. ಪೊಲೀಸರು ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರತದ ರಕ್ಷಣೆಗೆ ಧಕ್ಕೆಯಾಗುವ ರೀತಿಯಲ್ಲಿ ವ್ಯಕ್ತಿಗಳು ನಡೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಅವರನ್ನು ಬಂಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ NSA ಅವಕಾಶ ನೀಡುತ್ತದೆ. ಈ ಕಾಯ್ದೆಯಡಿ ಬಂಧನದ ಅವಧಿ ಮೂರು ತಿಂಗಳಿಂದ ಒಂದು ವರ್ಷದವರೆಗೆ ಇರಬಹುದು. ಆದರೆ, ಅವಧಿ ಪೂರ್ಣಗೊಳ್ಳುವ ಮೊದಲೇ ಬಂಧನವನ್ನು ರದ್ದುಗೊಳಿಸಬಹುದಾಗಿದೆ. ಇದು ಬಂಧನಾತ್ಮಕ ಕ್ರಮವಾಗಿರುವುದರಿಂದ, ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಕಾನೂನುಬದ್ದ ಬಾಧ್ಯತೆ ಇರುವುದಿಲ್ಲ.
ಪ್ರತಿ ತ್ರೈಮಾಸಿಕದ ಬಳಿಕ NSA ಅಡಿ ಬಂಧನಾಧಿಕಾರವನ್ನು ನಿಯಮಿತವಾಗಿ ವಿಸ್ತರಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮನವಿ ಸಲ್ಲಿಸಲಾಗಿಲ್ಲ ಎಂದು ದೆಹಲಿ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಅಧಿಕಾರವನ್ನು 1980ರಿಂದಲೇ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.


