ದಾವಣಗೆರೆ : ಕಮಲ ಪಡೆಯ ಒಗ್ಗಟ್ಟು, ಕೈಗೆ ಇಕ್ಕಟ್ಟು – ಕೈ ಪಡೆಗೆ ಬಂಡಾಯ ಅಭ್ಯರ್ಥಿ ಕಂಟಕ ?

ದಾವಣಗೆರೆ, ಮಾ. 24 : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರದ (ದಾವಣಗೆರೆ ದಕ್ಷಿಣ, ಬಾಗಲಕೋಟೆ) ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 23 ಕೊನೆಯ ದಿನವಾಗಿತ್ತು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ತನ್ನ ಭರ್ಜರಿ ಶಕ್ತಿ ಪ್ರದರ್ಶನವನ್ನು ಪ್ರದರ್ಶಿಸಿದೆ. ಅದರಲ್ಲೂ ದಾವಣಗೆರೆಯಲ್ಲಿ ಮಾತ್ರ ಒಂದು ಕೈಮೇಲು ಎನ್ನುವಂತೆ ಬಿಜೆಪಿಯ ಅಬ್ಬರ ಜೋರಾಗಿಯೇ ಇತ್ತು.

Advertisement

ಏಪ್ರಿಲ್ ಒಂಬತ್ತರಂದು ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿಯಿಂದ ಪರಿಶಿಷ್ಟ ಪಂಗಡ ಸಮುದಾಯದ ಶ್ರೀನಿವಾಸ ದಾಸ ಕರಿಯಪ್ಪ ಮತ್ತು ಕಾಂಗ್ರೆಸ್ಸಿನಿಂದ ಲಿಂಗಾಯತ ಸಮುದಾಯದ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್’ಗಾಗಿ ಹಲವರ ಹೆಸರು ಕೇಳಿ ಬಂದಿತ್ತು. ಆದರೆ, ಬಿಜೆಪಿಯ ಹೈಕಮಾಂಡ್ ಅಳೆದುತೂಗಿ ದಾವಣಗೆರೆಯ ಪ್ರಭಾವಿ ನಾಯಕ ಮತ್ತು ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರ ಆಪ್ತರಾಗಿರುವ ST ಮೋರ್ಚಾದ ಶ್ರೀನಿವಾಸ ಕರಿಯಪ್ಪಗೆ ಟಿಕೆಟ್ ನೀಡಿದೆ. ಟಿಕೆಟ್ ಘೋಷಣೆಯಾದ ಬೆನ್ನಲ್ಲೇ, ಇವರು ಸಿದ್ದೇಶ್ವರ ಅವರ ನಿವಾಸಕ್ಕೆ ತೆರಳಿ ಅವರ ಮತ್ತು ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ಆಶೀರ್ವಾದವನ್ನು ಪಡೆದಿದ್ದರು. ಆ ವೇಳೆ, ಗೆದ್ದು ಬಾ ಎಂದು ಅವರನ್ನು ಸಿದ್ದೇಶ್ವರ ಆಶೀರ್ವದಿಸಿದ್ದರು.

ದಾವಣಗೆರೆ ಬಿಜೆಪಿ ಟಿಕೆಟ್ ವಿಚಾರದಲ್ಲಿ ಜಿಎಂ ಸಿದ್ದೇಶ್ವರ ಬಣದ ಕೈಮೇಲಾಯಿತು ಎನ್ನುವ ರೀತಿಯಲ್ಲಿ ಎಂಪಿ ರೇಣುಕಾಚಾರ್ಯ ಹೇಳಿಕೆಯನ್ನು ನೀಡಿದ್ದರು. ಸಿದ್ದೇಶ್ವರ, ಬಿಪಿ ಹರೀಶ್ ಮುಂತಾದ ನಾಯಕರು, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಬಿಜೆಪಿ ವರಿಷ್ಠರ ಬಳಿ ದೂರು ನೀಡಿದ್ದರು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಪ್ರಯತ್ನವನ್ನು ಸಿದ್ದೇಶ್ವರ ಎಂಡ್ ಟೀಂ ಮಾಡಿರುವುದು ಗೊತ್ತಿರುವ ವಿಚಾರ. ಈ ಹಿನ್ನಲೆಯಲ್ಲಿ, ದಾವಣಗೆರೆಯಲ್ಲಿ ನಾಮಪತ್ರ ಸಲ್ಲಿಕೆ ಕುತೂಹಲಕ್ಕೆ ಕಾರಣವಾಗಿತ್ತು.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಕರಿಯಪ್ಪ ನಾಮಪತ್ರ ಸಲ್ಲಿಸುವ ವೇಳೆ, ಯಡಿಯೂರಪ್ಪ ಮತ್ತು ಅವರ ಬಣದಲ್ಲಿ ಗುರುತಿಸಿಕೊಂಡಿರುವ ಎಂಪಿ ರೇಣುಕಾಚಾರ್ಯ ಮತ್ತು ಇನ್ನೊಂದು ಬಣದ ಜಿಎಂ ಸಿದ್ದೇಶ್ವರ ಜೊತೆಯಾಗಿ ಇದ್ದು, ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದು, ಕಾರ್ಯಕರ್ತರ ಉತ್ಸಾಹಕ್ಕೆ ಇಮ್ಮಡಿಯಾಗಲು ಕಾರಣವಾಯಿತು. ಇಷ್ಟೇ ಅಲ್ಲದೇ, ನಾಮಪತ್ರ ಸಲ್ಲಿಸಿದ ನಂತರ, ಬೃಹತ್ ರೋಡ್’ಶೋ ನಡೆಸಲಾಯಿತು. ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ತೆರೆದ ಜೀಪ್’ನಲ್ಲಿ ನಡೆದ ಈ ಮೆರವಣಿಗೆಯಲ್ಲಿ ಯಡಿಯೂರಪ್ಪ, ಜಿಎಂ ಸಿದ್ದೇಶ್ವರ, ರೇಣುಕಾಚಾರ್ಯ, ಸಿಟಿ ರವಿ ಮುಂತಾದ ನಾಯಕರು ಇದ್ದರು. ಯಡಿಯೂರಪ್ಪ, ಸಿದ್ದೇಶ್ವರ, ಸಿಟಿ ರವಿ, ರೇಣುಕಾಚಾರ್ಯ, ಅಕ್ಕಪಕ್ಕದಲ್ಲೇ ನಿಂತು, ಕಾರ್ಯಕರ್ತರಿಗೆ ಕೈಬೀಸುತ್ತಾ ಮೆರವಣಿಗೆಯಲ್ಲಿ ಬಂದರು. ಸಿದ್ದೇಶ್ವರ ಮತು ಯಡಿಯೂರಪ್ಪ ಜೊತೆಯಾಗಿ ಓಪನ್ ಜೀಪ್’ನಲ್ಲಿದ್ದದ್ದು ಸ್ಥಳೀಯ ಕಾರ್ಯಕರ್ತರು ಮತ್ತು ಕಾರ್ಯಕರ್ತರಿಗೆ ಹುಮ್ಮಸ್ಸನ್ನು ತಂದು ಕೊಟ್ಟಿತು. ಎರಡು ಬಣಗಳ ನಡುವಿನ ತೀವ್ರ ಮನಸ್ತಾಪದ ಮಧ್ಯೆಯೂ, ಇಬ್ಬರು ಜೊತೆಯಾಗಿ ಕಾಣಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಕಸಿವಿಸಿಗೆ ಕಾರಣವಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗುಂಪುಗಾರಿಕೆಯಿಂದಲೇ ದಾವಣಗೆರೆ ಕ್ಷೇತ್ರ ಸೋತಿದ್ದು ಎನ್ನುವ ವರದಿ ಅಮಿತ್ ಶಾ ಕೈಸೇರಿತ್ತು. ಈ ಹಿನ್ನಲೆಯಲ್ಲಿ, ಬಿಜೆಪಿಯ ಒಗ್ಗಟ್ಟು ಪ್ರದರ್ಶನ, ಕಾಂಗ್ರೆಸ್’ಅನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಯಾಕೆಂದರೆ, ನಿರ್ಣಾಯಕ ಅಲ್ಪಸಂಖ್ಯಾತರ ಮತ, ಕೈತಪ್ಪಿದರೆ, ಶಾಮನೂರು ಕುಟುಂಬಕ್ಕೆ ಗೆಲುವು ಸುಲಭವಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಚಾರ. ಈಗಾಗಲೇ ಹಲವಾರು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೈ ಪಕ್ಷಕ್ಕೆ ಕಂಟಕ ಎದುರಾದಂತಿದೆ.

ಇನ್ನೊಂದು ಕಡೆ, ಸಮಥ್ ಶಾಮನೂರು ನಾಮಪತ್ರ ಸಲ್ಲಿಸುವ ವೇಳೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹಾಜರಿದ್ದರು. ಕಾಂಗ್ರೆಸ್ ಕೂಡಾ ಬೃಹತ್ ರೋಡ್’ಶೋ ನಡೆಸಿದರೂ, ಅಲ್ಪಸಂಖ್ಯಾತ ಸಮುದಾಯದ ಬೆಂಬಲ ಕೊರತೆ ಎದುರಾಗುತ್ತಿದೆಯೇ ಎನ್ನುವ ಭಾವನೆ ಮೂಡುವಂತಿತ್ತು. ರೋಡ್’ಶೋಗೂ ಮುನ್ನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಯುವಕರು, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.