ದೆಹಲಿ : FRS ಅಳವಡಿಕೆ – ಜಂತರ್ ಮಂತರ್ ಪ್ರತಿಭಟನೆಯಲ್ಲಿ 2,500ಕ್ಕೂ ಹೆಚ್ಚು ಅಪರಾಧಿಗಳ ಪತ್ತೆ !

ದೆಹಲಿ, ಜು. 25 : ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆಯ ವೇಳೆ ಜುಲೈ 20ರಂದು ನಡೆದ ಹಿಂಸಾಚಾರದ ತನಿಖೆ ಮುಂದುವರಿದಿದೆ. ಇದೇ ವೇಳೆ ಪ್ರತಿಭಟನ ಸ್ಥಳದಲ್ಲಿ ಅಳವಡಿಸಲಾಗಿರುವ ದೆಹಲಿ ಪೊಲೀಸರ ಮುಖ ಗುರುತಿಸುವ ವ್ಯವಸ್ಥೆ (FRS) ಮೂರು ದಿನಗಳಲ್ಲಿ ಪ್ರತಿಭಟನಾ ಸ್ಥಳದಲ್ಲಿದ್ದ 2,500ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ವಿರೋಧ ಪಕ್ಷಗಳ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯ ವೇಳೆ ಘರ್ಷಣೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ನಿಗಾ ವ್ಯವಸ್ಥೆಯನ್ನು ಬಲಪಡಿಸಲು FRS(Facial Recognition System) ಅಳವಡಿಸಲಾಗಿತ್ತು. ಜುಲೈ 21ರಿಂದ 23ರವರೆಗೆ ಈ ವ್ಯವಸ್ಥೆ 2,500ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಮೇಲೆ ಚಾಕು ದಾಳಿ

ಸಿಜೆಪಿ ಪ್ರತಿಭಟನೆಯ ಹೆಸರಿನಲ್ಲಿ ಪೊಲೀಸರ ಮೇಲೆಯೇ ದಾಳಿ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರತಿಭಟನಾಕಾರರ ಗುಂಪಿನಲ್ಲಿ ಸೇರಿಕೊಂಡಿದ್ದ ಕೆಲ ದುಷ್ಕರ್ಮಿಗಳು ಭದ್ರತಾ ಸಿಬಂದಿಯನ್ನು ಗುರಿಯಾಗಿಸಿಕೊಂಡು ಚಾಕುಗಳು ಹಾಗೂ ಇತರ ಹರಿತವಾದ ಆಯುಧಗಳಿಂದ ದಾಳಿ ನಡೆಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಪ್ರತಿಭಟನಾ ಸ್ಥಳದ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ನಾಲ್ಕು FRS ಘಟಕಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ದೆಹಲಿ ಪೊಲೀಸ್ ಇಲಾಖೆಯ ಡೇಟಾಬೇಸ್‌ಗೆ ಸಂಪರ್ಕಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಈ ವ್ಯವಸ್ಥೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸ್ ದಾಖಲೆಗಳಲ್ಲಿ ಈಗಾಗಲೇ ಮಾಹಿತಿ ಹೊಂದಿರುವ ವಾಂಟೆಡ್‌ ಕ್ರಿಮಿನಲ್‌ಗಳು ಅಥವಾ ಪದೇಪದೇ ಅಪರಾಧಗಳಲ್ಲಿ ತೊಡಗುವವರನ್ನು ತತ್ ಕ್ಷಣ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ.

ಜುಲೈ 20ರಂದು ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಭದ್ರತಾ ಸಿಬಂದಿಯೊಂದಿಗೆ ಘರ್ಷಣೆ ನಡೆಸಿದ ಬಳಿಕ ಮುಖ ಗುರುತಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ದೆಹಲಿ ಪೊಲೀಸರು 15 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಪೊಲೀಸ್ ಸಿಬಂದಿ ಮೇಲೆ ದಾಳಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.

‘ಕೊಲೆ ಯತ್ನ’ ಆರೋಪ

ಮೂಲಗಳ ಪ್ರಕಾರ, ದೆಹಲಿಯ ಕರ್ತವ್ಯ ಪಥ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1) ಅಡಿಯಲ್ಲಿ ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಿರುವ ಈ ಎಫ್‌ಐಆರ್, ರೈಲ್ ಭವನ ಮತ್ತು ಸಂಸತ್ ಸಮೀಪ ನಡೆದ ಘರ್ಷಣೆಗಳಿಗೆ ಸಂಬಂಧಿಸಿದೆ.

ನಿಷೇಧಾಜ್ಞೆಯ ರೂಪದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಜಾರಿಯಲ್ಲಿದ್ದು, ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಧ್ವನಿವರ್ಧಕಗಳ ಮೂಲಕ ಪದೇಪದೇ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಪ್ರತಿಭಟನಾಕಾರರು ಸ್ಥಳದಿಂದ ಚದುರಲು ನಿರಾಕರಿಸಿದ್ದು, ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ಸಂಸತ್ ಭವನದತ್ತ ಮೆರವಣಿಗೆ ನಡೆಸುವಂತೆ ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಪೊಲೀಸ್ ಸಿಬಂದಿಯನ್ನು ಸುತ್ತುವರಿದು ಕಲ್ಲುಗಳು ಮತ್ತು ಚಪ್ಪಲಿಗಳಿಂದ ಹಲ್ಲೆ ನಡೆಸಲಾಗಿದ್ದು, ಕೊಲೆ ಮಾಡುವ ಉದ್ದೇಶದಿಂದ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿ ಹಾಗೂ ಖಾಸಗಿ ವಾಹನಗಳಿಗೂ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಆರಂಭಗೊಂಡಿದ್ದವು. ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಸುಧಾರಣೆಗಳಿಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.

‘ಸಂಸತ್ ಚಲೋ’ ಕರೆ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಬೆಂಬಲಿತ ಪ್ರತಿಭಟನಾಕಾರರು ಜುಲೈ 20ರಂದು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಮುಂದಾದಾಗ ದೆಹಲಿ ಪೊಲೀಸರು ಅವರನ್ನು ತಡೆದಿದ್ದರು. ಈ ವೇಳೆ ಘರ್ಷಣೆ ಉಂಟಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದರು. ಘಟನೆಯಲ್ಲಿ ಹಲವು ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬಂದಿ ಗಾಯಗೊಂಡಿದ್ದರು. ಹಿಂಸಾಚಾರದ ಬಳಿಕ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.