ಬೆಳ್ತಂಗಡಿ, ಜು. 26 : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದ ಅಡೆಂಜ ನಿವಾಸಿ ಮಹಮ್ಮದ್ ಇದ್ರೀಸ್ ಎಂಬವರ ನೂತನ ಕಟ್ಟಡದ ಮೇಲೆ ಜು.15 ರಂದು ರಾತ್ರಿ ಖೋಟಾನೋಟು ತಯಾರಿಸುತ್ತಿದ್ದ ಕೇಂದ್ರಕ್ಕೆ ದಾಳಿ ಮಾಡಿ ಏಳು ಜನರನ್ನು ಬಂದಿಸಿದ್ದ ಪ್ರಕರಣ ಸಂಬಂಧ ಇಂದು ಓರ್ವ ಆರೋಪಿಯನ್ನು ಕರೆದುಕೊಂಡು ಬಂದು ಗುರುವಾಯನಕೆರೆ ಅಪಾರ್ಟೆಂಟ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಉಪ್ಪಿನಂಗಡಿಯ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಈ ಮೊದಲು ಬೆಳ್ತಂಗಡಿಯ ಎರಡು ಬಾಡಿಗೆ ಮನೆಯಲ್ಲಿ ಖೋಟಾನೋಟು ಪ್ರಿಂಟ್ ಮಾಡಲು ತಯಾರಿ ನಡೆಸಿದ್ದರು. ಜಾಗ ಕಡೆಯಾಗಿದ್ದರಿಂದ ಉಪ್ಪಿನಂಗಡಿಗೆ ಸ್ಥಳಾಂತರ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಆರೋಪಿ ಉತ್ತರ ಕನ್ನಡ ಜಿಲ್ಲೆಯ ಸಂದೀಪ್ ಪುಂಡಲೀಕ ಶೋಳಂಬಿ(30) ಮಾಹಿತಿಯಂತೆ, ಆತನನ್ನು ಕರೆದುಕೊಂಡು ಬಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಪಾಡ್ಯಾರಮಜಲು ನಿವಾಸಿ ಅಬ್ದುಲ್ ಶಕಿಲ್ ಎಂಬವರಿಗೆ ಸೇರಿದ ಬಿ.ಎ.ಅಪಾರ್ಟೆಂಟ್ ಹೆಸರಿನ 14 ಬಾಡಿಗೆ ಮನೆಗಳ ಪೈಕಿ 101 ಮತ್ತು 108 ಬಾಡಿಗೆ ಮನೆ ಮೇಲೆ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಜು.26 ರಂದು ಬೆಳಗ್ಗೆ 9 ಗಂಟೆಗೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.


