ಇದು ಪಕ್ಕಾ ಸಿನಿಮೀಯ ವಂಚನೆ ! ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಖದೀಮರು ಪರಾರಿ

ಬೆಂಗಳೂರು, ಮೇ 20 : ಮಲ್ಲೇಶ್ವರಂನಲ್ಲಿ ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಯೊಬ್ಬರಿಗೆ ಭಾರಿ ವಂಚನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಈ ಹೈಟೆಕ್ ಕಳ್ಳತನ ನಡೆದಿದ್ದು, ವಂಚಕರು ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರತ್ ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಶಾಪ್ ಮಾಲೀಕರು ಈ ಜಾಲದ ಕೈಗೆ ಸಿಲುಕಿ ಕೋಟಿ ಕೋಟಿ ಮೌಲ್ಯದ ಬಂಗಾರವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

Advertisement

ಬೋರ್ಡ್ ಬದಲಾಯಿಸಿ ಖೆಡ್ಡಾಕ್ಕೆ ಕೆಡವಿದ ಖದೀಮರು

ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಪರೇಶ್ ಸೋನಿ ಎಂಬಾತ ಕರೆ ಮಾಡಿ, ತಮಗೆ ‘ಮಾಹಿ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ಇದ್ದು, ಹೋಲ್‌ಸೇಲ್ ದರದಲ್ಲಿ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂದು ನಂಬಿಸಿ ಆಫೀಸ್‌ಗೆ ಕರೆಸಿಕೊಂಡಿದ್ದ. ಆತ ತನಗೂ ಮತ್ತು ತನ್ನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಮತ್ತು ‘ಮಾಹಿ ಎಂಟರ್‌ಪ್ರೈಸಸ್’ ಎಂದು ನಕಲಿ ಬೋರ್ಡ್ ಹಾಕಿ ಈ ವ್ಯವಸ್ಥಿತ ಸಂಚು ರೂಪಿಸಿದ್ದ. ವ್ಯಾಪಾರದ ಆರ್ಡರ್ ದೊಡ್ಡದಿದೆ ಎಂದು ನಂಬಿದ ಜ್ಯುವೆಲ್ಲರಿ ಮ್ಯಾನೇಜರ್, ಮಾಲೀಕರ ಸೂಚನೆಯಂತೆ ಬರೋಬ್ಬರಿ 3 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿದ್ದ ಪರೇಶ್ ಸೋನಿ ಕಚೇರಿಗೆ ಹೋಗಿದ್ದರು. ಮ್ಯಾನೇಜರ್ ಆಭರಣ ತಂದಾಗ, ಅವುಗಳ ವಿನ್ಯಾಸವನ್ನು ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ತನ್ನ ಸಹಚರ ಚಂದ್ರಶೇಖರ್ ಎಂಬಾತನಿಗೆ ಒಪ್ಪಿಸಿ ಆಭರಣಗಳ ಪಟ್ಟಿ (List) ಸಿದ್ಧಪಡಿಸಲು ಹೇಳಿದ್ದ.

ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದ ಆರೋಪಿಗಳು ಅಲ್ಲಿಂದಲೇ ಚಿನ್ನದೊಂದಿಗೆ ನಾಪತ್ತೆಯಾಗಿದ್ದಾರೆ. ಒಳಗೆ ಹೋದವರು ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಅನುಮಾನಗೊಂಡು ಮ್ಯಾನೇಜರ್ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಸದ್ಯ ಈ ಭಾರಿ ಕಳ್ಳತನ ಕೇಸ್​​​ಗೆ ಸಂಬಂಧಿಸಿದಂತೆ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ಎಂಬುವವರ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.